ನವದೆಹಲಿ, ಜು17(Daijiworld News/SS): ಸಂವಿಧಾನದ ಚೌಕಟ್ಟು, ನಿಯಮಾವಳಿ ಬಿಟ್ಟು ಒಂದು ಅಂಗುಲವೂ ಕದಲುವುದಿಲ್ಲ ಎಂದು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ಅತೃಪ್ತ ಶಾಸಕರ ರಾಜೀನಾಮೆ ಕುರಿತು ತೀರ್ಮಾನಿಸುವಲ್ಲಿ ಮನಸೋ ಇಚ್ಚೆ ವಿಳಂಬ ಮಾಡುವ ಉದ್ದೇಶವಿಲ್ಲ. ಶಾಸಕರನ್ನು ವಿಧಾನಸಭೆಗೆ ಹಾಜರಾಗುವಂತೆ ಮಾಡುವುದು ನನ್ನ ಕೆಲಸವಲ್ಲ, ಅದು ಆಯಾ ಪಕ್ಷಗಳ ಕೆಲಸ. ಬಂದ ದಿನಕ್ಕೆ ಹಾಜರಾತಿ ಸಿಗುತ್ತದೆ. ಬಾರದ ದಿನಕ್ಕೆ ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ನಾನೇನಿದ್ದರೂ ಅಂಪೈರ್ ಅಷ್ಟೇ. ನನ್ನ ಕರ್ತವ್ಯ ನಾನು ಮಾಡುತ್ತೇನೆ. ಸಂವಿಧಾನದ ಚೌಕಟ್ಟು, ನಿಯಮಾವಳಿ ಬಿಟ್ಟು ಒಂದು ಅಂಗುಲವೂ ಕದಲುವುದಿಲ್ಲ. ಸುಪ್ರೀಂ ಕೋರ್ಟ್ ಮಾರ್ಮಿಕವಾಗಿ ಹೇಳಿರುವುದನ್ನು ಗೌರವಿಸಿ ನಡೆದುಕೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಅತೃಪ್ತ ಶಾಸಕರ ರಾಜಿನಾಮೆ ಕುರಿತು ಇಂದು ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸಿದ್ದು, ನಿರ್ಧಿಷ್ಟ ಸಮಯದಲ್ಲಿ ರಾಜಿನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅತೃಪ್ತ ಶಾಸಕರ ರಾಜೀನಾಮೆ ಕುರಿತು ಕಾಲಮಿತಿಯೊಳಗೆ ತೀರ್ಪು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡಿದೆ. ರಾಜೀನಾಮೆಗೆ ಕಾರಣ ನೀಡುವಂತೆ ಒತ್ತಾಯಿಸುವಂತಿಲ್ಲ. ಅಧಿವೇಶನಕ್ಕೆ ಭಾಗವಹಿಸಬೇಕೆ ಬೇಡವೆ ಎಂಬುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನಿರ್ದಿಷ್ಟ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದಿರುವ ಕೋರ್ಟ್, ಕಾಲಮಿತಿ ಎಷ್ಟು ಎಂಬುದನ್ನು ನಿಗದಿಪಡಿಸಿಲ್ಲ. ಸಂವಿಧಾನ ಸಮತೋಲನ ಅಗತ್ಯ ಎಂದಿರುವ ಸುಪ್ರೀಂ ಕೋರ್ಟ್ ರಾಜೀನಾಮೆಗಳ ಕುರಿತು ಸ್ಪೀಕರ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿದೆ.