ಬೆಂಗಳೂರು, ಜು17(Daijiworld News/SS): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಶಾಸಕನಾಗಿ ಸುಪ್ರೀಂಕೋರ್ಟ್ನ ತೀರ್ಪನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋರ್ಟ್ ಕಾನೂನಿನಲ್ಲಿ ಹೇಳಿರುವ ನ್ಯಾಯವನ್ನೇ ಎತ್ತಿ ಹಿಡಿದಿದೆ. ಸ್ಪೀಕರ್ಗೆ ಇರುವ ಅಧಿಕಾರ ಏನೆಂಬುದನ್ನೇ ನ್ಯಾಯಾಲಯ ತಿಳಿಸಿದೆ. ಶಾಸಕರು ಕಲಾಪಕ್ಕೆ ಹೋಗಬಹುದು, ಬಿಡಬಹುದು. ಆದರೆ, ಯಾವುದೇ ಪಕ್ಷದ ಕೈಯಲ್ಲಿ ವಿಪ್ ಅಧಿಕಾರ ಇದ್ದೇ ಇರುತ್ತದೆ. ಅನರ್ಹತೆ ಎಂಬುದು ವಿಭಿನ್ನ ಕಾನೂನು. ಒಂದು ಬಾರಿ ಅನರ್ಹರಾದರೆ ಮತ್ತೊಂದು ಬಾರಿ ಚುನಾವಣೆಯಲ್ಲಿ ಗೆಲ್ಲುವವರೆಗೂ ಮಂತ್ರಿಯಾಗಲು ಸಾಧ್ಯವೇ ಇಲ್ಲ. ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ ಎಂದು ಹೇಳಿದರು.
ರಾಜೀನಾಮೆ ಕೊಟ್ಟವರನ್ನು ನಾನು ಇವತ್ತಿಗೂ ರೆಬಲ್ ಎಂದು ಒಪ್ಪಿಕೊಳ್ಳುವುದಿಲ್ಲ. ಅವರೆಲ್ಲ ನನ್ನ ಸ್ನೇಹಿತರೇ. ನಿಮ್ಮ ಕ್ಷೇತ್ರದ ಜನರ ಮುಖ ನೋಡಿ. ಕುಟುಂಬದವರ ಮುಖ ನೋಡಿ. ಬೇರೆಯವರನ್ನು ನಂಬಿ ಹೋಗಬೇಡಿ. ಮಂಗನ ಟೋಪಿ ಹಾಕುತ್ತಾರೆ ಎಂದು ಹೇಳಿದ್ದಾರೆ.
ನಾನು ಮಾಧ್ಯಮಗಳ ಮುಖಾಂತರ ಅವರಲ್ಲಿ ಮನವಿ ಮಾಡುತ್ತೇನೆ. ದಯವಿಟ್ಟು ಎಲ್ಲಾ ಶಾಸಕರೂ ಮರಳಿ ಬನ್ನಿ ಎಂದು ವಿನಂತಿಸಿದರು.