ರಾಂಚಿ, ಜು 17 (Daijiworld News/RD): ಧಾರ್ಮಿಕತೆಗೆ ಧಕ್ಕೆ ತರುವಂತಹ ಪ್ರಚೋದನಕಾರಿ ಪೋಸ್ಟ್ ನ್ನು ಯುವತಿಯೋರ್ವಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆಗೆ ಸಂಬಂಧಪಟ್ಟಂತೆ ಕೋರ್ಟ್ ಆಕೆಗೆ ಷರತ್ತುಬದ್ಧ ಜಾಮೀನು ನೀಡಿದೆ.
ಜಾರ್ಖಂಡ್ನಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ರೀಚಾ ಭಾರ್ತಿ ಈ ಪೋಸ್ಟ್ ಹಾಕಿದ್ದರು. ಕೋಮು ಸಂಘರ್ಷ ಸೃಷ್ಟಿಸುವ ಸಾಧ್ಯತೆ ಕಂಡು ಇವರನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ಬಗ್ಗೆ ಜಾಮೀನು ಕೋರಿ ರೀಚಾ ಭಾರ್ತಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಕುರ್ ಆನ್ ನ ಐದು ಪ್ರತಿಯನ್ನು ವಿವಿಧ ಸಂಸ್ಥೆಗಳಿಗೆ ವಿತರಿಸಬೇಕು ಎಂದು ಷರತ್ತು ವಿಧಿಸಿ ರೀಚಾ ಭಾರ್ತಿ ಗೆ ನ್ಯಾಯಲಯ ಜಾಮೀನು ನೀಡಿದೆ. ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ಜಾಮೀನು ನೀಡಿದ ೧೫ ದಿನದೊಳಗೆ ಮುಸ್ಲಿಂ ಧಾರ್ಮಿಕ ಗ್ರಂಥವಾದ ಕುರಾನಿನ ೫ ಪ್ರತಿಗಳನ್ನು ಹಂಚುವಂತೆ ಆದೇಶ ನೀಡಿದೆ. ಅದರಲ್ಲಿ ಒಂದು ಪ್ರತಿಯೂ ಅಂಜುಮನ್ ಇಸ್ಲಾಮಿಯಾ ಸಮಿತಿಗೆ ಹಾಗೂ ಉಳಿದ ನಾಲ್ಕು ಪ್ರತಿಯನ್ನು ವಿವಿಧ ಶಾಲಾ, ಕಾಲೇಜುಗಳ ಗ್ರಂಥಾಲಯಗಳಿಗೆ ನೀಡುವಂತೆ ಸೂಚಿಸಿದೆ. ಮತ್ತು ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ವಹಿಸುವಂತೆ ಕೋರ್ಟ್ ಕಿವಿಮಾತು ಹೇಳಿದೆ.
ವಿದ್ಯಾರ್ಥಿಯನ್ನು ಬಂಧಿಸಿದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ಹಾಗೂ ಟೀಕೆ ವ್ಯಕ್ತವಾಗಿದ್ದು, ವಿದ್ಯಾಥಿಯ ಬಿಡುಗಡೆಗೆ ಹಿಂದೂ ಸಂಘಟನೆಗಳು ಒತ್ತಾಯ ನಡೆಸಿ ಹೋರಾಟ ನಡೆಸಿತ್ತು.
ಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯಿಸಿ ಮಾತನಾಡಿದ ರೀಚಾ ಭಾರ್ತಿ, ಕುರಾನ್ ಹಂಚುವ ಯಾವ ಉದ್ದೇಶವೂ ನಾನು ಹೊಂದಿಲ್ಲ. ಮುಸ್ಲಿಮರೂ ಕೂಡಾ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕುತ್ತಾರೆ. ಆದರೆ ಅಂತಹ ಮುಸ್ಲಿಂರ ವಿರುದ್ಧ ಯಾಕೆ ಯಾವ ಕ್ರಮವೂ ಕೈಗೊಳ್ಳುವುದಿಲ್ಲ ಎಂದು ಆಕೆ ಪ್ರಶ್ನಿಸಿದ್ದಾಳೆ. ಇಂದು ನನ್ನಿಂದ ಕುರ್ ಆನ್ ಹಂಚುವಂತೆ ಹೇಳಿ, ನಾಳೆ ಮುಸ್ಲಿಂ ಧರ್ಮವನ್ನು ಸ್ವೀಕರಿಸುವುದಕ್ಕೆ ಅಥವಾ ನಮಾಜ್ ಮಾಡುವುದಕ್ಕೆ ನಿರ್ದೇಶನ ನೀಡಬಹುದು. ಹಿಂದೂ ಧರ್ಮದ ವಿರುದ್ಧ ಮಾತನಾಡಿದ ಮುಸ್ಲಿಂರಿಗೆ ಎಂದಾದರೂ ರಾಮಾಯಣ ಹಂಚಲು ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾಳೆ.