ಬೆಂಗಳೂರು, ಜು17(Daijiworld News/SS): ಈ ಸರ್ಕಾರ ಉಳಿದರೆ ಬಡವರಿಗೆ ಅನುಕೂಲ ಆಗುತ್ತದೆ ಎಂದು ಎಚ್. ಡಿ.ರೇವಣ್ಣ ಹೇಳಿದ್ದು, ಅತೃಪ್ತ ಶಾಸಕರನ್ನು ವಾಪಸ್ ಬರುವಂತೆ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ದೇವರು ಕೊಟ್ಟ ಸರ್ಕಾರ. ಈ ಸರ್ಕಾರ ಉಳಿದರೆ ಬಡವರಿಗೆ ಅನುಕೂಲ ಆಗುತ್ತದೆ. ಇಂದಿನ ಸ್ಥಿತಿಗೆ ಯಾರನ್ನೂ ದೂಷಿಸುವುದಿಲ್ಲ. ನನ್ನಿಂದ ತಪ್ಪು ಆಗಿದ್ದರೆ ಕ್ಷಮಿಸಿ. ದಯವಿಟ್ಟು ವಾಪಸ್ ಬನ್ನಿ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮನವಿ ಮಾಡಿದರು.
ಇವತ್ತಿನ ಸ್ಥಿತಿಗೆ ನಾನೇ ಕಾರಣ ಎನ್ನುತ್ತಾರೆ. ಆದರೆ, ಖಂಡಿತ ನನ್ನ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳ ಕಡೆ ಗಮನ ಹರಿಸಿಲ್ಲ. ಯಾವುದೇ ಅಧಿಕಾರಿಗಳ ವರ್ಗಾವಣೆಯಲ್ಲಿ ತಲೆ ಹಾಕಿಲ್ಲ. ಪ್ರತಿದಿನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇನೆ ಎಂದು ನುಡಿದರು.
ಎಚ್.ಡಿ.ರೇವಣ್ಣ ಮತ್ತು ಕುಮಾರಸ್ವಾಮಿ ಹೊಡೆದಾಡುತ್ತಾರೆ ಎಂಬುದೆಲ್ಲ ಕನಸು. ನನ್ನ ಮೇಲೆ ತಂದೆ-ತಾಯಿ ಆಶೀರ್ವಾದ ಇದೆ. ನಾನು ಈ ಮಟ್ಟಕ್ಕೆ ಬೆಳೆದದ್ದು ಅವರ ಆಶೀರ್ವಾದದಿಂದಲೇ. ನಾನು ಯಾವ ಶಾಸಕರ ಮನಸನ್ನೂ ನೋಯಿಸಿಲ್ಲ. ಲಿಂಬೆಹಣ್ಣನ್ನು ಇಟ್ಟುಕೊಂಡಿಲ್ಲ ಎಂದು ಹೇಳಿದರು.
ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಮಾಡಿದ ಒಂದೇ ತಪ್ಪು ಎಂದರೆ ಒಬ್ಬರನ್ನ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದೆ. ಅವರು ಯಾರೆಂದು ಹೇಳುವುದಿಲ್ಲ. ನಾನ್ಯಾರಿಗಾದರೂ ಅನ್ಯಾಯ ಮಾಡಿದರೆ ಮಹಾಲಕ್ಷ್ಮೀ ತಾಯಿ ನೋಡಿಕೊಳ್ಳುತ್ತಾಳೆ. ಕುಮಾರಸ್ವಾಮಿ ದೇವರಂತಹ ಮನುಷ್ಯ. ಅವರು ನನ್ನ ತಮ್ಮ ಎಂದು ಹೇಳಿಕೊಳ್ಳುತ್ತಿಲ್ಲ. ಸದಾ ಬಡವರ ಪರ ಇರುತ್ತಾರೆ ಎಂದು ಹೇಳಿದರು.
ಮಾಧ್ಯಮದವರು ನನ್ನನ್ನು ಸೂಪರ್ ಸಿಎಂ ಎನ್ನುತ್ತಾರೆ. ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ. ಕೆಲ ದಿನಗಳಿಂದ ನನ್ನ ಬಗ್ಗೆ ವಿನಾಕಾರಣ ಪ್ರಚಾರ ಮಾಡಲಾಗುತ್ತಿದೆ. ಬೆಂಗಳೂರಿನ ಔಟರ್ ರಿಂಗ್ ರೋಡ್ ಎಲಿವೇಟೆಡ್ ಕಾಮಗಾರಿ ನನ್ನ ಅವಧಿಯಲ್ಲಿ ಆಗಿಲ್ಲ. 2004ರಲ್ಲಿ ಘೋಷಣೆ ಆಗಿದ್ದು. ಆಗ 4 ಸಾವಿರ ಕೋಟಿ ರೂಪಾಯಿ ಯೋಜನೆಯಾಗಿತ್ತು. ಇಂದು 17 ಸಾವಿರ ಕೋಟಿ ರೂಪಾಯಿ ಆಗಿದೆ ಎಂದು ತಿಳಿಸಿದರು.