ನವದೆಹಲಿ, ಜು 17 (Daijiworld News/SM): ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಸುದ್ದಿಯಾಗುತ್ತಿದ್ದ ಅಕ್ರಮ ವಲಸಿಗರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದು, ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ದೇಶದಲ್ಲಿರುವ ಅಕ್ರಮ ವಲಸಿಗರನ್ನು ತಕ್ಷಣ ಪತ್ತೆಹಚ್ಚಲು ಕ್ರಮಕೈಗೊಳ್ಳಲಾಗುವುದು ಹಾಗೂ ಅವರನ್ನು ದೇಶದಿಂದ ಹೊರಗಟ್ಟುವುದಾಗಿ ರಾಜ್ಯ ಸಭೆಯಲ್ಲಿ ಅವರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಕೇವಲ ಅಸ್ಸಾಂಗೆ ಮಾತ್ರ ಸೀಮಿತವಾಗುತ್ತದೆ. ಬಳಿಕ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ದೇಶದ ಎಲ್ಲಾ ಭಾಗದಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲಾಗುವುದಾಗಿ ಅವರು ತಿಳಿಸಿದ್ದಾರೆ.
2013 ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ 2018ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಎನ್ಆರ್ಸಿ ಪರಿಷ್ಕರಣೆ ಮಾಡಿತ್ತು. ಬಾಂಗ್ಲಾದೇಶ ಪ್ರತ್ಯೇಕ ದೇಶವಾದ ನಂತರ ಬಾಂಗ್ಲಾದಿಂದ ಅಸ್ಸಾಂಮಿಗೆ ಅಕ್ರಮ ವಲಸಿಗರು ಬರಲಾರಂಭಿಸಿದರು. ಅದು ಇಂದಿಗೂ ಮುಂದುವರಿದಿದ್ದು, ಇದು ದೇಶದ ಭದ್ರತೆಗೆ ಮಾರಕವಾಗುತ್ತಿದೆ.
ಇದೇ ಕಾರಣಕ್ಕೆ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಆರಂಭಗೊಳಿಸಲಾಗಿದೆ. ಇದರ ಪ್ರಕಾರ ಸೂಕ್ತ ಗುರುತಿನ ಚೀಟಿಯೊಂದಿಗೆ ಭಾರತೀಯರು ಎಂದು ಗುರುತಿಸಿಕೊಂಡವರಿಗೆ ಮಾತ್ರವೇ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಈ ಪಟ್ಟಿಯಲ್ಲಿಲ್ಲದವರನ್ನು ವಿದೇಶಿಗರೆಂದು ಪರಿಗಣಿಸಿ ದೇಶದಿಂದ ಗಡಿಪಾರು ಮಾಡಲಾಗುವುದಾಗಿ ಶಾ ತಿಳಿಸಿದ್ದಾರೆ.