ನವದೆಹಲಿ, ಜು 17 (Daijiworld News/SM): ಕೇಂದ್ರದ ರೈಲ್ವೇ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿಯವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯವರು ಭೇಟಿಯಾಗಿದ್ದಾರೆ. ಹಾಗೂ ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ ಹಲವು ಮನವಿಗಳನ್ನು ಸಲ್ಲಿಸಿದ್ದಾರೆ.
ಮಂಗಳೂರನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ರೈಲ್ವೇಗೆ ಸೇರಿಸುವಂತೆ 2004ರಲ್ಲಿ ಆಗಿರುವ ಗೆಜೆಟ್ ನೋಟಿಫಿಕೆಷನ್ ಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ. ತೋಕೂರಿನಿಂದ ಮಂಗಳೂರು ಸೆಂಟ್ರಲ್ ನೇತ್ರಾವತಿ ತನಕ ಪಾಲಕ್ಕಾಡ್ ರೈಲ್ವೇ ವಿಭಾಗದಲ್ಲಿರುವ ಪ್ರದೇಶವನ್ನು ಬದಲಾಯಿಸುವಂತೆ ಸಚಿವರಿಗೆ ಸಂಸದರು ದಾಖಲೆಗಳನ್ನು ಸಲ್ಲಿಸಿದರು.
ಇನ್ನು ಮಂಗಳೂರು-ಬೆಂಗಳೂರು ಮಧ್ಯೆ ವಾರದ 4 ದಿನ ಶ್ರವಣಬೊಳಗೊಳ ಹಾಗೂ ಮೂರು ದಿನ ಮೈಸೂರು ಮಾರ್ಗವಾಗಿ ಸಂಚರಿಸುವ ರೈಲನ್ನು ವಾರದ ಏಳು ದಿನವೂ ಶ್ರವಣಬೆಳಗೊಳ ಮಾರ್ಗವಾಗಿ ಓಡಿಸಲು ಮನವಿ ಸಲ್ಲಿಸಲಾಯಿತು. ಅಲ್ಲದೆ, ಮಂಗಳೂರು-ಯಶವಂತಪುರ ರೈಲನ್ನು ವಾರದ ಏಳು ದಿನವೂ ಓಡಿಸುವಂತೆ ಮನವಿ ಮಾಡಲಾಯಿತು.
ಇನ್ನು ಈಗಾಗಲೇ ಮಂಜೂರಾಗಿರುವ ಮಂಗಳೂರು ಕೇಂದ್ರ ನಿಲ್ದಾಣದಲ್ಲಿನ 4 ಮತ್ತು 5ನೇ ಫ್ಲ್ಯಾಟ್ ಫಾರಂ ನಿರ್ಮಾಣ ಕಾಮಗಾರಿಗೆ ಮೂರು ವರ್ಷದ ಹಿಂದೆಯೇ ಅನುದಾನ ಬಿಡುಗಡೆಗೊಂಡಿದೆ. ಇದುವರೆಗೂ ಕಾಮಗಾರಿ ಆರಂಭಿಸಿಲ್ಲ ಎಂದು ಸಚಿವರ ಗಮನಕ್ಕೆ ತರಲಾಯಿತು. ಇದಕ್ಕೆ ತಕ್ಷಣ ಸ್ಪಂಧಿಸಿದ ಸಚಿವರು ಪಾಲಕ್ಕಾಡ್ ಡಿ.ಆರ್.ಎಂ.ಗೆ ಕರೆ ಮಾಡಿ ಶೀಘ್ರ ಸ್ಪಂಧಿಸುವಂತೆ ಆದೇಶ ನೀಡಿದರು.
ಇನ್ನು ಮಂಗಳೂರು ರೈಲು ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟದ ನಿಲ್ದಾಣ ಮಾಡುವುದಾಗಿ ೨೦೦೯ರಲ್ಲೇ ಬಜೆಟ್ ನಲ್ಲಿ ಘೋಷಿಸಿದ್ದರೂ ಇದುವರೆಗೂ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಇದನ್ನು ಪರಿಶೀಲಿಸಿ ಶಿಘ್ರ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.