ಬೆಂಗಳೂರು, ಜು18(Daijiworld News/SS): ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಇಂದು ನಡೆಯುವ ವಿಶ್ವಾಸ ಮತ ಯಾಚನೆಯಲ್ಲಿ ನಿರ್ಧಾರವಾಗಲಿದೆ. ಮೈತ್ರಿ ಸರ್ಕಾರದ ಪತನಕ್ಕೆ ಬಿಜೆಪಿ ಆಟಕ್ಕೆ ಪ್ರತಿಯಾಗಿ 'ವಿಶ್ವಾಸ ಮತ' ಯಾಚನೆಯ ಪ್ರತಿ ದಾಳ ಉರುಳಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳುವ ಶತಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದೋಸ್ತಿ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಎದುರಾಗಿದ್ದು, ಅತೃಪ್ತ ಶಾಸಕರ ರಾಜಿನಾಮೆ ಪ್ರಹಸನದ ಬೆನ್ನಲ್ಲೇ ಸಿಎಂ ಎಚ್ ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಒಂದೆಡೆ ಸುಪ್ರೀಂ ಕೋರ್ಟ್'ನ ತೀರ್ಪನ್ನು ನಾವು ಗೌರವಿಸುತ್ತೇವೆ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮುಂಬೈಯಿಂದ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್'ನ ಮಧ್ಯಂತರ ಆದೇಶ ಹೊರಬಂದ ನಂತರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಮಗೆ ಕೋರ್ಟ್ ತೀರ್ಪು ಮೇಲೆ ವಿಶ್ವಾಸವಿದೆ, ನಮ್ಮ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ತೀರ್ಪು ನೀಡಿದೆ. ನಾಳೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಅತೃಪ್ತ ಶಾಸಕರ ಪರವಾಗಿ ಮಾತನಾಡಿರುವ ಬಿ ಸಿ ಪಾಟೀಲ್ ನಾವು ಮತ್ತೆ ಸರ್ಕಾರಕ್ಕೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜು.17ರಂದು ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ಆದೇಶ ದೋಸ್ತಿ ಸರ್ಕಾರಕ್ಕೆ ಮತ್ತೆ ಅತಂಕ ತಂದೊಡ್ಡಿದೆ. ಶಾಸಕರನ್ನು ಕಟ್ಟಿಹಾಕಲು ಸೂಕ್ತವಾಗುವಂಥ ತೀರ್ಪನ್ನು ಎದುರು ನೋಡುತ್ತಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸುಪ್ರೀಂ ತೀರ್ಪು ನಿರಾಸೆ ಮೂಡಿಸಿದ್ದು, ಅತೃಪ್ತ ಶಾಸಕರಿಗೆ ಬಲ ನೀಡಿದಂತಾಗಿದೆ.
ಒಟ್ಟಾರೆ ಇಂದು ವಿಧಾನಸೌಧದಲ್ಲಿ ನಡೆಯಲಿರುವ ವಿಶ್ವಾಸ ಮತ ಕೇವಲ ರಾಜ್ಯದ ಮಟ್ಟಿಗೆ ಮಾತ್ರವಲ್ಲ, ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುವ ಮೂಲಕ ರಾಷ್ಟ್ರೀಯ ಮಾಧ್ಯಮಗಳ ಗಮನ ಕೂಡ ಸೆಳೆದಿದೆ.