ಹೊಸದಿಲ್ಲಿ, ಜು18(Daijiworld News/SS): ರಾಮಮಂದಿರ ಪ್ರಕರಣದಲ್ಲಿ ನಡೆಯುತ್ತಿರುವ ರಾಜಿ ಸಂಧಾನ ಪ್ರಗತಿಯನ್ನು ಸುಪ್ರೀಂಕೋರ್ಟ್ ಇಂದು ಪರಿಶೀಲನೆ ನಡೆಸಲಿದೆ.
ಜುಲೈ 11ರಂದು ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠ ಅಯೋಧ್ಯೆ ಭೂವಿವಾದ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಪೀಠ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನ ಸಮಿತಿಗೆ, ಸಂಧಾನ ಪ್ರಕ್ರಿಯೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಜುಲೈ 18ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿ, ಅದೇ ದಿನಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತ್ತು.
ಐವರು ನ್ಯಾಯ ಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠವು ಜುಲೈ 11ರಂದು ರಾಜಿ ಸಂಧಾನ ಸಮಿತಿಯಿಂದ ವರದಿ ಆಗ್ರಹಿಸಿತ್ತು. ಅಷ್ಟೇ ಅಲ್ಲ, ರಾಜಿ ಸಂಧಾನ ಪ್ರಕ್ರಿಯೆ ವಿಫಲವಾದರೆ ಜುಲೈ 25 ರಿಂದ ದೈನಂದಿನ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿತ್ತು. ಅಯೋಧ್ಯೆ ಪ್ರಕರಣದಲ್ಲಿ ಮೂಲ ದಾವೆದಾರ ಗೋಪಾಲ್ ಸಿಂಗ್ ವಿಶಾರದ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ನಿರ್ದೇಶನ ಹೊರಡಿಸಿತ್ತು.
ಅದರಂತೆ ಇಂದು ರಾಜಿ ಸಂಧಾನ ಸಮಿತಿ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎಫ್ಎಂಐ ಖಲೀಫುಲ್ಲಾ ಸುಪ್ರೀಂಕೋರ್ಟ್ಗೆ ಹಾಜರಾಗಿ, ಸಂಧಾನ ಪ್ರಕ್ರಿಯೆಯ ಪ್ರಗತಿ ಹಾಗೂ ಸ್ಥಿತಿಗತಿಯನ್ನು ವರದಿ ಮಾಡಲಿದ್ದಾರೆ.