ನವದೆಹಲಿ, ಜು18 (Daijiworld News/RD): ಮದ್ಯಪಾನ ಮಾಡಿ ಕುಣಿಯುತ್ತಾ, ತನ್ನ ಎರಡೂ ಕೈಗಳಲ್ಲಿ ಗನ್ ಹಿಡಿದುಕೊಂಡು ಸುದ್ದಿಯಾಗಿದ್ದ ಉತ್ತರಾಖಂಡ ಬಿ.ಜೆ.ಪಿ. ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ಅವರನ್ನ ಬಿಜೆಪಿ ಪಕ್ಷ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ.
ತನ್ನ ಎರಡೂ ಕೈಗಳಲ್ಲಿ ಗನ್ ಹಿಡಿದುಕೊಂಡು ಶೋಕಿ ಮಾಡಿದ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕಳೆದ ವಾರ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ಬಿಳಿ ಪ್ಯಾಂಟ್ ಧರಿಸಿ ಹಾಗೂ ಕಪ್ಪು ಬಣ್ಣದ ಬನಿಯನ್ ತೊಟ್ಟುಕೊಂಡು, ತನ್ನ ಎರಡೂ ಕೈಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲಿನಲ್ಲಿ ಮದ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಪೋಸ್ ನೀಡಿದ ಶಾಸಕ ಪ್ರಣವ್ ಸಿಂಗ್ ಅವರನ್ನ ಭಾರತೀಯ ಜನತಾ ಪಾರ್ಟಿ ಪಕ್ಷವು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.
ಶಾಸಕ ಪ್ರಣವ್ ಸಿಂಗ್ ಜೊತೆಯಲ್ಲಿ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪ್ರಣವ್ ಸಿಂಗ್ ಈ ಹಿಂದೆಯು ಕೂಡ ನೈತಿಕ ಪ್ರಜ್ಞೆ ಮರೆತು ವರ್ತಿಸಿದ್ದು, ಹಲವು ಬಾರಿ ದುರ್ನಡತೆ ತೋರಿದ್ದರು ಎಂದು ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣವೇ ಗನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಪರವಾನಿಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತನಿಖೆ ನಡೆಸಿದರು.
ಇತ್ತೀಚೆಗೆ ದಿಲ್ಲಿಯ ಉತ್ತರಾಖಂಡ ನಿವಾಸದಲ್ಲಿ ಪತ್ರಕರ್ತರೊಬ್ಬರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ಮೂರು ತಿಂಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದ್ದು ಈ ವರ್ತನೆಗೆ ಮತ್ತೆ ಮುಜುಗರಕ್ಕೀಡಾಗಿ ಇವರನ್ನು ಪಕ್ಷ ಅಮಾನತುಗೊಳಿಸಿದೆ.
2016ರಲ್ಲಿ ಸಿಎಂ ಹರೀಶ್ ರಾವತ್ ವಿರುದ್ಧ ಬಂಡೆದ್ದು ಬಿಜೆಪಿ ಸೇರಿದ್ದ ಇಬ್ಬರು ಶಾಸಕರಲ್ಲಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ಕೂಡ ಒಬ್ಬ. ಕೆಲವು ತಿಂಗಳ ಹಿಂದೆ ಝಬ್ರೇಡಾದ ಬಿಜೆಪಿ ಶಾಸಕ ದೇಶರಾಜ್ ಕರ್ನಾವಾಲ್ ಗೆ ಬೆದರಿಕೆ ಹಾಕಿದ್ದಲ್ಲದೆ ಕುಸ್ತಿಯಾಡಲು ಸವಾಲು ಹಾಕಿದ್ದರು.