ನವದೆಹಲಿ, ಜು18(Daijiworld News/SS): ರಾಕೆಟ್ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ–2 ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ರಾಕೆಟ್'ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಬಹು ನಿರೀಕ್ಷಿತ ಚಂದ್ರಯಾನ-2 ಜು.22ಕ್ಕೆ ಉಡಾವಣೆಯಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಕೆಟ್'ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೊನೆ ಕ್ಷಣದಲ್ಲಿ ರದ್ದಾಗಿದ್ದ ಭಾರತೀಯ ಬಾಹ್ಯಾಕಾಶ ಲೋಕದ ಬಹು ನಿರೀಕ್ಷಿತ ಚಂದ್ರಯಾನ-2 ಉಡಾವಣೆ ಮುಂದಿನ ಸೋಮವಾರ (ಜು.22) ಅಪರಾಹ್ನ 2.43 ಗಂಟೆಗೆ ನಿಗದಿಯಾಗಿದೆ.
ಜು.15ರಂದು ನಸುಕಿನ ಜಾವ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ರಾಕೆಟ್ನಲ್ಲಿ ಕ್ರಯೋಜೆನಿಕ್ ಇಂಧನ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆ ರದ್ದುಪಡಿಸಲಾಗಿತ್ತು.
ವಿಜ್ಞಾನಿಗಳು-ತಂತ್ರಜ್ಞರು ಇಂಧನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸತತ ಪರಿಶ್ರಮ ವಹಿಸಿದ್ದು, ಉಡ್ಡಯನಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ. ಜನರ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಇಸ್ರೊ ಇಂದು ಟ್ವೀಟ್ ಮಾಡಿ ಜುಲೈ 22ರಂದು ಭಾರತೀಯ ಕಾಲಮಾನ ಅಪರಾಹ್ನ 2.43 ಗಂಟೆಗೆ ಉಡಾವಣೆಯಾಗಲಿದೆ ಎಂದು ತಿಳಿಸಿದೆ.