ನವದೆಹಲಿ, ಜು18(Daijiworld News/SS): ಕುಲಭೂಷಣ್ ಜಾಧವ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪಾಕಿಸ್ತಾನವನ್ನು ಭಾರತ ಒತ್ತಾಯಿಸಿದೆ. ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ ನಂತರ ಭಾರತ ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದೆ.
ಈ ಕುರಿತು ಸದನದಲ್ಲಿ ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಜಾಧವ್ ಅವರನ್ನು ಕಂಡು ಭೇಟಿ ಮಾಡಿ ಅವರ ಜೊತೆ ಮಾತನಾಡುವ ಭಾರತದ ಹಕ್ಕನ್ನು ಪಾಕಿಸ್ತಾನ ವಂಚಿಸಿದ್ದಲ್ಲದೆ, ಕಾನೂನು ಹೋರಾಟಕ್ಕೆ ಕೂಡ ಅಡ್ಡಿಪಡಿಸಿದಂತೆ ಕಾಣುತ್ತದೆ. ಅವರು ನಿರಪರಾಧಿಯಾಗಿದ್ದು, ಅವರ ವಿರುದ್ಧ ಪಾಕಿಸ್ತಾನ ಮಾಡುತ್ತಿರುವ ಆರೋಪ ನಿರಾಧಾರವಾಗಿದೆ. ಕಾನೂನು ಪ್ರಾತಿನಿಧಿತ್ವವಿಲ್ಲದೆ ಅವರನ್ನು ಒತ್ತಾಯಪೂರ್ವಕವಾಗಿ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಗಿದೆ ಎಂದು ಹೇಳಿದರು.
ಜಾಧವ್ ಅವರನ್ನು ಭಾರತಕ್ಕೆ ಕರೆತರಲು ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ಹೇಳಿದ ಅವರು, ಕುಲಭೂಷಣ ಜಾಧವ್ ಅವರನ್ನು ಕೂಡಲೇ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿ ಎಂದು ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಪಾಕಿಸ್ತಾನ ಬಂಧಿಸಿತ್ತು. ನಂತರ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಭಾರತದ ಮಾಜಿ ನೌಕಾಪಡೆ ಅಧಿಕಾರಿಯಾಗಿದ್ದ ಜಾಧವ್ ಅವರನ್ನು 2016 ರ ಮಾರ್ಚ್ 3 ರಂದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಪಾಕಿಸ್ತಾನದ ನಡೆಯನ್ನು ವಿರೋಧಿಸಿ ಭಾರತ ನೆದರ್ಲೆಂಡ್'ನ ಹೇಗ್'ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಬುಧವಾರ ಈ ಬಗ್ಗೆ ತೀರ್ಪು ನೀಡಿದ್ದ ನ್ಯಾಯಾಲಯ, ಕುಲಭೂಷಣ್ ಅವರಿಗೆ ಪಾಕಿಸ್ತಾನ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಅಮಾನತು ಮಾಡಿತ್ತು.