ಬೆಂಗಳೂರು, ಜು 18 (Daijiworld News/SM): ಗುರುವಾರದಂದು ಸದನದಲ್ಲಿ ಮೈತ್ರಿ ಸರಕಾರ ವಿಶ್ವಾಸಮತ ಮಂಡಿಸಬೇಕಿತ್ತು. ಆದರೆ, ಸುದೀರ್ಘ ಚರ್ಚೆ ನಡೆದು ಕಲಾಪವೇ ಮುಂದೂಡಲಾಗಿದ್ದು, ವಿಶ್ವಾಸಮತ ಯಾಚಿಸಿಲ್ಲ.
ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಪ್ರಹಸನದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆಗೆ ಸರಕಾರ ಆದೇಶ ನೀಡಲಾಗಿತ್ತು. ಆದರೆ, ಗುರುವಾರ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ, ಆಡಳಿತ, ವಿಪಕ್ಷ ಸದಸ್ಯರ ನಡುವೆ ಗದ್ದಲ ಕೋಲಾಹಲ ನಡೆಯಿತು. ಈ ವೇಳೆ ಕಲಾಪದಿಂದ ಸ್ಪೀಕರ್ ರಮೇಶ್ ಕುಮಾರ್ ಹೊರನಡೆದರು. ಬಳಿಕ ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ ಮುಂದುವರಿಯಿತು. ಆದರೆ ಕೋಲಾಹದಿಂದ ವಿಶ್ವಾಸಮತ ಯಾಚಿಸದೇ ಕಲಾಪ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತು.
ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ವಿಧಾನಸಭೆ ಕಲಾಪ ಆರಂಭಗೊಂಡಿತ್ತು. ಸಿಎಂ ಕುಮಾರಸ್ವಾಮಿ ಪ್ರಸ್ತಾವನೆ ಮಾಡಿದ್ದರು. ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಕ್ರಿಯಾಲೋಪದ ಪ್ರಶ್ನೆ ಎತ್ತಿದ್ದರು.
ಕಾಂಗ್ರೆಸ್ ನ ಹಲವು ಶಾಸಕರು ಕ್ರಿಯಾಲೋಪದ ಬಗ್ಗೆ ಧ್ವನಿಗೂಡಿಸಿದರು. ಆದರೆ ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿಯ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಇದು ಉದ್ದೇಶಪೂರ್ವಕ ವಿಳಂಬದ ತಂತ್ರ ಎಂದು ಆರೋಪಿಸಿದರು.
ಮಧ್ಯಾಹ್ನ 3ಗಂಟೆ ನಂತರ ಕಲಾಪ ಆರಂಭಗೊಂಡಾಗಲೂ ಗದ್ದಲ, ಕೋಲಾಹಲ ನಡೆದು ಅರ್ಧ ಗಂಟೆ ಕಾಲ ಕಲಾಪ ಮುಂದೂಡಲ್ಪಟ್ಟಿತ್ತು. ಮತ್ತೆ ಕಲಾಪ ಆರಂಭವಾದಾಗಲೂ ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಮುಂದುವರಿದಿತ್ತು. ಬಿಜೆಪಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು.
ಇದೇ ಕಾರಣದಿಂದಾಗಿ ಇಂದೇ ವಿಶ್ವಾಸಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಸ್ಪೀಕರ್ ಗೆ ಸೂಚಿಸಿದರು. ಬಿಜೆಪಿ ಸದಸ್ಯರು ಕೂಡಾ ವಿಶ್ವಾಸಮತ ಇಂದೇ ಸಾಬೀತುಪಡಿಸಿ ಎಂದು ಪಟ್ಟು ಹಿಡಿದಾಗ ಕೋಲಾಹಲ, ಗದ್ದಲದಿಂದಾಗಿ ಕಲಾಪವನ್ನು ನಾಳೆಗೆ ಮುಂದೂಡಿದರು.