ಬೆಂಗಳೂರು, ಜು 18 (Daijiworld News/SM): ರಾಜ್ಯಪಾಲರಿಂದ ವೋಟ್ ಆಫ್ ಕಾನ್ಫಿಡೆನ್ಸ್ ಬಗ್ಗೆ ಮಾಹಿತಿ ಬಂದಿತ್ತು. ರಾಜ್ಯಪಾಲರು ಇಂದೇ ಮತ ಹಾಕುವಂತೆ ಸೂಚನೆಯನ್ನು ನೀಡಿದ್ದರು. ರಾಜ್ಯಪಾಲರು ಇದನ್ನ ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ನಾನು ಸರಕಾರವಾಗಲಿ, ಪ್ರತಿಪಕ್ಷದ ಒತ್ತಡಕ್ಕಾಗಲಿ ಮಣಿಯೂವುದಿಲ್ಲ ಎಂದು ಖಡಕ್ ಆಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸದನದಲ್ಲಿ ಈ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದರು. ಬಳಿಕ ಮಾತನಾಡಿದ ಸಚಿವ ಆರ್.ವಿ. ದೇಶಪಾಂಡೆ, ರಾಜ್ಯಪಾಲರು ಸ್ಪೀಕರ್ ಮೇಲೆ ಒತ್ತಡ ತರಲಾಗದು. ಇಷ್ಟೇ ಸಮಯದಲ್ಲಿ ಮತ ಹಾಕಿ ಎಂದು ಆದೇಶಿಸುವಂತಿಲ್ಲ. ಆರ್ಟಿಕಲ್ 175ರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖವಿದೆ ಎಂದು ಸದನದ ಗಮನಕ್ಕೆ ತಂದರು.
ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು ವಿಶ್ವಾಸಮತಯಾಚನೆ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದೆಯೋ ಹೊರತು ಬೇರಾವುದೇ ವಿಚಾರದ ಕುರಿತಂತೆ ಅಲ್ಲ. ಸದನದಲ್ಲಿ ಸದಸ್ಯರ ಅಭಿಪ್ರಾಯಗಳಿಗೆ ಅವಕಾಶವಿದೆ. ಅಭಿಪ್ರಾಯ ವ್ಯಕ್ತಪಡಿಸಲು ಯಾರಿಗೂ ಅಡ್ಡಿಮಾಡುವಂತಿಲ್ಲ. ಸದನದಲ್ಲಿ ಸ್ಪೀಕರ್ಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, ನಾನು ಯಾರ ಒತ್ತಡಕ್ಕೂ ಮಣಿಯುವವನಲ್ಲ. ನಾನು ಸರ್ಕಾರ, ಪ್ರತಿಪಕ್ಷದ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.