ಬೆಂಗಳೂರು, ಜು 18 (Daijiworld News/SM): ಸಾಕಷ್ಟು ನಾಟಕೀಯ ಬೆಳವಣಿಗೆಯ ಬಳಿಕ ಇದೀಗ ಮೈತ್ರಿ ಸರಕಾರ ಅಳಿವು-ಉಳಿವಿಗೆ ಮುಹೂರ್ತ ಫಿಕ್ಸ್ ಆಗಿದೆ. ಶುಕ್ರವಾರ ಮಧ್ಯಾಹ್ನ 1.30 ರೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂ ಕುಮಾರಸ್ವಾಮಿ ಅವರಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸ ಮತಯಾಚನೆ ಚರ್ಚೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲ ನಡೆಸಿದರು. ಹಾಗೂ ಸದನದಲ್ಲಿ ಬಹುಮತ ಸಾಬೀತು ಪಡಿಸುವ ಬದಲು ಚರ್ಚೆಯಲ್ಲಿ ಇಂದಿನ ದಿನ ಕಳೆದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು.
ಮನವಿಯನ್ನು ಪುರಸ್ಕರಿಸಿರುವ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಹಾಗೂ ಶುಕ್ರವಾರ ಮಧ್ಯಾಹ್ನದ ಒಳಗಾಗಿ ಬಹುಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡಿದ್ದಾರೆ.
ಗುರುವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಗೊತ್ತುವಳಿ ಮಂಡಿಸುವಂತೆ ಸಿಎಂಗೆ ಸೂಚನೆ ಕೊಟ್ಟಿದ್ದರು. ಬಹುಮತ ಸಾಬೀತುಪಡಿಸಲಾಗದ ಮೈತ್ರಿ ಸರ್ಕಾರದ ನಾಯಕರು ಸದನದಲ್ಲಿ ಕೋಲಾಹಲ ಎಬ್ಬಿಸಿದ್ದರು. ಇದರಿಂದ ಗುರುವಾರದಂದು ಇದು ಅಸಾಧ್ಯವಾಗಿತ್ತು.