ಬೆಂಗಳೂರು, ಜು 18 (Daijiworld News/SM): ಗುರುವಾರದಂದು ಸದನದಲ್ಲಿ ಮೈತ್ರಿ ಸರಕಾರ ವಿಶ್ವಾಸಮತ ಮಂಡಿಸಬೇಕಿತ್ತು. ಆದರೆ, ಸುದೀರ್ಘ ಚರ್ಚೆ ನಡೆದು ಕಲಾಪವೇ ಮುಂದೂಡಲಾಗಿದ್ದು, ವಿಶ್ವಾಸಮತ ಯಾಚಿಸಿಲ್ಲ. ಈ ಹಿನ್ನೆಲೆ ಬಿಜೆಪಿ ನಾಯಕರು ಸದನದಲ್ಲೇ ಉಳಿದುಕೊಂಡಿದ್ದಾರೆ. ಗುರುವಾರ ರಾತ್ರಿ ವಿಧಾನಸಭಾ ಮೊಗಸಾಲೆಯಲ್ಲಿ ಕಳೆಯುತ್ತಿದ್ದಾರೆ.
ಬಿಜೆಪಿ ಶಾಸಕರು ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಸಿದರಲ್ಲದೇ ಸ್ಥಳದಲ್ಲೇ ಭೋಜನ ಸ್ವೀಕರಿಸಿದರು.
ಇನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಪ್ರಹಸನದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆಗೆ ಸರಕಾರಕ್ಕೆ ಆದೇಶ ನೀಡಲಾಗಿತ್ತು. ಆದರೆ, ಗುರುವಾರ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ, ಆಡಳಿತ, ವಿಪಕ್ಷ ಸದಸ್ಯರ ನಡುವೆ ಗದ್ದಲ ಕೋಲಾಹಲ ನಡೆಯಿತು. ಈ ವೇಳೆ ಕಲಾಪದಿಂದ ಸ್ಪೀಕರ್ ರಮೇಶ್ ಕುಮಾರ್ ಹೊರನಡೆದರು. ಬಳಿಕ ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ ಮುಂದುವರಿಯಿತು. ಆದರೆ ಕೋಲಾಹದಿಂದ ವಿಶ್ವಾಸಮತ ಯಾಚಿಸದೇ ಕಲಾಪ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತು.