ಬೆಂಗಳೂರು, ಜು19(Daijiworld News/SS): ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕಂಪನಿ ಮಾಲೀಕ ಮನ್ಸೂರ್ ಖಾನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣ ಹೊರಬೀಳುತ್ತಿದ್ದಂತೆ ದೇಶಬಿಟ್ಟು ಪರಾರಿಯಾಗಿದ್ದ ಖಾನ್, ದುಬೈನಲ್ಲಿ ಅಡಗಿಕೊಂಡು ಅಲ್ಲಿಂದಲೇ ವೀಡಿಯೋ ಸಂದೇಶಗಳನ್ನು ಬಿಡುಗಡೆ ಮಾಡುತ್ತಿದ್ದ. ತನಗೆ ರಕ್ಷಣೆ ನೀಡುವುದಾದಲ್ಲಿ 24 ಗಂಟೆಯೊಳಗೆ ಭಾರತಕ್ಕೆ ವಾಪಸ್ ಬರುವುದಾಗಿ ಮೊನ್ನೆಯಷ್ಟೇ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದ.
ಅದರಂತೆ, ರಕ್ಷಣೆ ಕೊಡುತ್ತೇವೆ ಎಂದು ಆತನಿಗೆ ಭರವಸೆ ನೀಡಿ ಭಾರತಕ್ಕೆ ಬರಲು ಎಸ್ಐಟಿ ಸೂಚಿಸಿತ್ತು. ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್ ಭಾರತಕ್ಕೆ ಆಗಮಿಸುತ್ತಿರುವ ಖಚಿತ ಮಾಹಿತಿನ್ನು ಆಧರಿಸಿ ಎಸ್ಐಟಿ ಅಧಿಕಾರಿಗಳು ಗುರುವಾರ ಮಧ್ಯರಾತ್ರಿ 1.50 ಕ್ಕೆ ಮನ್ಸೂರ್ನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಆತನನ್ನು ವಶಕ್ಕೆ ತೆಗೆದುಕೊಂಡು ರಕ್ಷಣೆ ನೀಡಿರುವ ಎಸ್ಐಟಿ ತಂಡ ದಿಲ್ಲಿಯಲ್ಲೇ ಬೀಡು ಬಿಟ್ಟಿದೆ. ಸದ್ಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿರುವ ಎಸ್ಐಟಿ ಶೀಘ್ರವೇ ಆತನನ್ನು ಬೆಂಗಳೂರಿಗೆ ಕರೆ ತರುವ ನಿರೀಕ್ಷೆಯಿದೆ. ಎಸ್ಐಟಿ ಮನ್ಸೂರ್ ಖಾನ್ ವಿರುದ್ಧ ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿತ್ತು.
ಐಎಂಎ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿತ್ತು. ಜಾರಿ ನಿರ್ದೇಶನಾಲಯ ಸಹ ದೂರು ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ನಡೆಸುತ್ತಿತ್ತು. ಇದುವರೆಗೂ ಮನ್ಸೂರ್ ಖಾನ್ ಮತ್ತು ಐಎಂಎ ವಿರುದ್ದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಂಚನೆ ದೂರು ದಾಖಲಾಗಿದೆ.