ಬೆಂಗಳೂರು, ಜು19(Daijiworld News/SS): ದುರಾಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಜನರ ಹಿತವನ್ನು ಮರೆತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.
ರಾಜ್ಯಪಾಲ ವಿ.ಆರ್. ವಾಲಾ ಶುಕ್ರವಾರ ಮಧ್ಯಾಹ್ನ 1.30ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇಂದು ಭ್ರಷ್ಟ ಸರ್ಕಾರದ ಆಡಳಿತ ಕೊನೆಗೊಳ್ಳಲಿದೆ. ರಾಜ್ಯದ ಜನತೆಗೆ ಹಾಗೂ ಬಿಜೆಪಿ ಪಾಲಿಗೆ ಆಷಾಢದ ಶುಕ್ರವಾರ ಶುಭ ಶುಕ್ರವಾರವಾಗಲಿದೆ ಎಂದು ಹೇಳಿದರು.
ಇಂದೇ ವಿಶ್ವಾಸ ಮತದ ಮೇಲೆ ಮತ ವಿಭಜನೆ ನಡೆಯಲಿದೆ ಎಂದು ಎಲ್ಲ ಶಾಸಕರಿಗೂ ಸಂದೇಶ ಕಳುಹಿಸಲಾಗಿದೆ. ಬಿಜೆಪಿ ಸದಸ್ಯರ ಬಲ 105 ಇದ್ದು, ಮೈತ್ರಿ ಸರ್ಕಾರದ ಸದಸ್ಯರ ಬಲ 98ಕ್ಕೆ ಇಳಿದಿದೆ. ದೇವರ ದಯದಿಂದ ನೂರಕ್ಕೆ ನೂರು ವಿಶ್ವಾಸ ಮತಕ್ಕೆ ಹಿನ್ನಡೆಯಾಗಲಿದೆ. ಬಹುಶಃ ಇಂದೇ ಮೈತ್ರಿ ಸರ್ಕಾರದ ಆಡಳಿತ ಕೊನೆಗೊಳ್ಳಲಿರುವುದಾಗಿ ಭಾವಿಸಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಜನರ ಹಿತವನ್ನು ಮರೆತಿದೆ. ಬರ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಅದರ ಬಗ್ಗೆ ಸರ್ಕಾರ ತಲೆಕಡಿಸಿಕೊಂಡಿಲ್ಲ. ಸಾಲಮನ್ನಾ ಬಗ್ಗೆ ಸರ್ಕಾರ ಸುಳ್ಳು ಭರವಸೆ ನೀಡಿತ್ತು. ನಿನ್ನೆ ಮೈತ್ರಿ ಸರ್ಕಾರ ಸದನದ ಕಾಲಹರಣ ಮಾಡಲು ವ್ಯವಸ್ಥಿತವಾಗಿ ಸಿದ್ಧರಾಗಿ ಬಂದಿದ್ದರು. ಈ ವೇಳೆ ಬಿಜೆಪಿಯವರನ್ನು ಕೆರಳಿಸುವ ಯತ್ನ ಮಾಡಿದ್ದಾರೆ. ಆದರೆ ಬಿಜೆಪಿ ಸದಸ್ಯರು ಸದನದಲ್ಲಿ ಶಾಂತತೆ ಕಾಪಾಡಿಕೊಂಡಿದ್ದರು ಎಂದು ಹೇಳಿದರು.
ನಮ್ಮ ಶಾಸಕರು ಇಂದೂ ಶಾಂತ ರೀತಿಯಲ್ಲಿ ವರ್ತಿಸಲಿದ್ದಾರೆ. ರಾಜ್ಯಪಾಲರು ಸಿಎಂಗೆ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡಿರುವ ಕಾರಣ ಜೆಡಿಎಸ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅವರು ಒಂದು ವೇಳೆ ಸುಪ್ರೀಂಕೋರ್ಟ್ಗೆ ಹೋದರೆ, ಕೋರ್ಟ್ ಅವರಿಗೆ ಛೀಮಾರಿ ಹಾಕುತ್ತದೆ ಎಂದು ತಿಳಿಸಿದರು.