ನವದೆಹಲಿ, ಜು 19 (Daijiworld News/RD):ವಿವಿಧ ರೀತಿಯ ವಿಡಿಯೋಗಳ ಮೂಲಕ ಮನರಂಜಿಸುವ ಟಿಕ್ ಟಾಕ್, ಹೆಲೋ ಆಪ್ಗಳ ಮೇಲೆ ಭದ್ರತೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಆಪ್ಗಳನ್ನು ನಿಷೇಧಿಸುವ ಬಗೆಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಯುವ ಜನಾಂಗವನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿರುವ ಸಾಮಾಜಿಕ ಜಾಲತಾಣದ ಖ್ಯಾತ ಟಿಕ್ ಟಾಕ್ ಮತ್ತು ಹೆಲೋ ಆಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸುವಂತೆ ಚಿಂತನೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಎರಡೂ ಆಪ್ಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಈವರೆಗೂ ಈ ಸಂಸ್ಥೆಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಆಪ್ಗಳ ಆಡಳಿತ ಸಂಸ್ಥೆಯ ಮೇಲೆ ತೀವ್ರ ಕೋಪಗೊಂಡಿದೆ.
ಈ ಎರಡೂ ಆಪ್ಗಳ ಆಡಳಿತ ಮಂಡಳಿಗಳಿಗೆ ಕೇಂದ್ರ ಸರ್ಕಾರವು 21 ಪ್ರಶ್ನೆಗಳಿಗೆ ಉತ್ತರ ಕೇಳಿ ನೋಟಿಸ್ ನೀಡಿದ್ದು ಇದಕ್ಕೆ ಸೂಕ್ತ ಉತ್ತರ ನೀಡದೇ ಇರುವ ಕಾರಣದಿಂದಾಗಿ ಇವುಗಳನ್ನು ನಿಷೇಧಿಸುವುದಾಗಿ ಎಚ್ಚರಿಕೆ ಕೂಡ ನೀಡಿದೆ ಎಂದು ವರದಿಗಳು ಮಾಹಿತಿ ನೀಡಿದೆ.
ಈಗಾಗಲೇ ಟಿಕ್ ಟಾಕ್ ಮತ್ತು ಹೆಲೋ ಅಪ್ಲಿಕೇಷನ್ಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ ಎಂದು ಆರೋಪಿಸಿದ ರಾಷ್ಟ್ರೀಯ ಸೇವಕ ಸಂಘದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ್ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿತ್ತು. ಜೊತೆಗೆ ಸೋಷಿಯಲ್ ಮೀಡಿಯಾ ಸೈಟ್ ಗಳಲ್ಲಿ 11 ಸಾವಿರಕ್ಕೂ ಅಧಿಕ ತಿರುಚಿದ ರಾಜಕೀಯ ಜಾಹೀರಾತುಗಳ ಪ್ರಸಾರದಿಂದ ಭಾರಿ ಮೊತ್ತದ ಹಣ ಗಳಿಸುತ್ತಿದೆ ಎಂಬ ಆರೋಪದ ಮೇಲೆ ತೆರಿಗೆ ಸಚಿವಾಲಯ ಹೆಲೋನಿಂದ ವಿವರಣೆ ಕೇಳಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಗಂಭೀರ ಆರೋಪಗಳನ್ನು ಪರಿಗಣಿಸಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಸಂಸ್ಥೆಗಳಿಗೆ 21 ಪ್ರಶ್ನೆಗಳ ಬಯಸಿ ನೋಟಿಸ್ ನೀಡಿದೆ.ಆದರೆ ಈವರೆಗೆ ಆ ಎರಡು ಸಂಸ್ಥೆಗಳಿಂದ ಯಾವುದೇ ಉತ್ತರವಾಗಲಿ ಏನೂ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದೆ.
ಈ ಮೊದಲು ಅಲ್ಪಕಾಲದ ವಿಡಿಯೋಗಳನ್ನು ಮಾಡುವ ಈ ಜನಪ್ರಿಯ ಆಪ್ಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೀಡಿದ್ದು, ಈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದ ಬೆನ್ನಲ್ಲೇ ಕೇಂದ್ರವು ಟಿಕ್ ಟಾಕ್ನ್ನು ಆಪ್ ಸ್ಟೋರ್ಗಳಿಂದ ತೆಗೆದುಹಾಕುವಂತೆ ಗೂಗಲ್ ಮತ್ತು ಆಪಲ್ ಕಂಪೆನಿಗಳಿಗೆ ಈ ಮೊದಲು ಸೂಚನೆ ನೀಡಿರುತ್ತದೆ.
ಯುವಜನರನ್ನು ಹುಚ್ಚೆಬ್ಬಿಸಿ, ಕುಣಿಸಿ ಮನರಂಜಿಸುವ ಈ ಎರಡು ಆಪ್ಗಳಿಗೆ ಕೇಂದ್ರ ಸರ್ಕಾರ ಮತ್ತೆ ನಿಷೇಧ ಹೇರುವ ಮೂಲಕ ಸಂಕಷ್ಟದ ಸ್ಥಿತಿಯನ್ನು ನಿರ್ಮಾಣ ಮಾಡಿದೆ.