ಬೆಂಗಳೂರು, ಜು 19 (Daijiworld News/RD): ಬಹುಮತ ಇಂದೇ ಸಾಬೀತುಪಡಿಸಿ ಎಂದ ರಾಜ್ಯಪಾಲರ ಆದೇಶ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಸಿ.ಎಂ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಪಾಲರ ನಿರ್ದೇಶನದಂತೆ ಮೈತ್ರಿ ಸರ್ಕಾರವು ಇಂದು ಮಧ್ಯಾಹ್ನ 1.30ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ನಾಯಕರಿಗೆ ಸೂಚನೆ ನೀಡಿದ್ದು, ಆದರೆ ಈ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಗರ್ವನರ್ ನ ಈ ನಿರ್ದೇಶನಕ್ಕೆ ತಡೆಕೋರುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತೆ ಸುಪ್ರೀಂಕೋರ್ಟ್ನ ಬಾಗಿಲು ತಟ್ಟುವ ಸಾಧ್ಯತೆ ಇದೆ.
ಸರ್ಕಾರದ ಉಳಿವಿಗಾಗಿ ಹರಸಾಹಸ ಪಡುತ್ತಿರುವ ಮೈತ್ರಿ ನಾಯಕರು ವಿಶ್ವಾಸ ಮತಯಾಚನೆಯ ನಿರ್ಣಯ ಮಂಡನೆಯ ಮೇಲೆ ಮತ್ತೆರಡು ದಿನಗಳ ಕಾಲ ಚರ್ಚೆ ಆಗಬೇಕಿದೆ ಎಂದಿದ್ದಾರೆ. ಆದರೆ, ರಾಜ್ಯಪಾಲರು ಇವತ್ತೇ ಬಹುಮತ ಸಾಬೀತು ಮಾಡಿ ಎಂದು ಸೂಚನೆ ನಾಯಕರಿಗೆ ನೀಡಿದ್ದಾರೆ. ಈ ಕುರಿತು ಅಸಮಧಾನಗೊಂಡ ಸಿ.ಎಂ, ಕಾನೂನು ತಜ್ಞರ ಸಲಹೆ ಪಡೆದುಕೊಂಡು, ರಾಜ್ಯಪಾಲರ ನಿರ್ದೇಶನ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ.
“ವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಬೇಕು. ಹೀಗಿರುವಾಗ ರಾಜ್ಯಪಾಲರು ವಿಶ್ವಾಸ ಮತಯಾಚನೆಗೆ ನಿರ್ದೇಶನ ನೀಡಿದ್ದು ಸರಿ ಅಲ್ಲ,” ಎನ್ನುವ ಅಭಿಪ್ರಾಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ತುರ್ತಾಗಿ ವಿಚಾರಣೆ ನಡೆಸುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಅಧಿವೇಶನಕ್ಕೆ ಬಾರದ ಅತೃಪ್ತ ಶಾಸಕರ ಮೇಲೆ ಸದನಕ್ಕೆ ಬರಲು ಬಲವಂತಪಡಿಸುವಂತಿಲ್ಲ ಹಾಗೂ ಅವರ ವಿರುದ್ಧ ವಿಪ್ ಜಾರಿ ಮಾಡುವಂತಿಲ್ಲ ಎಂದ ಸೂಚಿಸಿದ ಸುಪ್ರೀಂಕೋರ್ಟ್. ಕೋರ್ಟ್ನ ಈ ಸೂಚನೆಯ ಬಗ್ಗೆ ಸ್ಪಷ್ಟೀಕರಣ ಕೇಳಲು ಸಿ.ಎಂ. ಹೆಚ್.ಡಿ.ಕೆ ಮುಂದಾಗಿದ್ದಾರೆ