ಬೆಂಗಳೂರು, ಜು 19 (Daijiworld News/RD): ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಲು ರಾಜ್ಯಪಾಲರು, ಸಿ.ಎಂ. ಹೆಚ್.ಡಿ.ಕೆಗೆ ಮತ್ತೊಂದು ಸಮಯಾವಕಾಶವನ್ನು ಇಂದು ನಿಗದಿ ಮಾಡಿದ್ದಾರೆ.
ರಾಜ್ಯಪಾಲರು ಈ ಹಿಂದೆ ವಿಧಾನಸಭೆಯ ಕಲಾಪ ಪೂರ್ಣಗೊಳ್ಳುವ ಮುನ್ನ ವಿಶ್ವಾಸ ಮತ ಸಾಬೀತು ಪಡಿಸುವಂತೆ ಆದೇಶ ನೀಡಿದ್ದರು. ಈ ಆದೇಶವು ಮುಖ್ಯಮಂತ್ರಿಯವರಿಗೆ 2ನೇ ಡೆಡ್ಲೈನ್ ಆಗಿದೆ. ಇಂದು ಮಧ್ಯಾಹ್ನ 1.30ರ ಒಳಗಡೆ ವಿಶ್ವಾಸ ಮತ ಸಾಬೀತು ಪಡಿಬೇಕೆಂದು ನಿನ್ನೆ ಆದೇಶ ನೀಡಿದ್ದರು. ಆದರೆ ಈ ಆದೇಶವನ್ನು ಸರ್ಕಾರ ಪಾಲನೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸಿಎಂ ಪತ್ರವನ್ನು ಬರೆದು ವಿವರಣೆ ನೀಡಿದ್ದರು.
ಸಿ.ಎಂ ಪತ್ರಕ್ಕೆ ರಾಜ್ಯಪಾಲರು ಪ್ರತಿಕ್ರಿಯಿಸಿದ್ದು, ಮತ್ತೊಂದು ಡೆಡ್ಲೈನ್ ನೀಡುವ ಮೂಲಕ 2ನೇ ಬಾರಿ ಸಮಯಾವಕಾಶವನ್ನು ನೀಡಿದ್ದಾರೆ. ಮುಖ್ಯಮಂತ್ರಿಗೆ ಸರ್ಕಾರವನ್ನು ಉಳಿಸಿಕೊಳ್ಳಲು ನೀಡಿರುವ ಈ ಕಾಲಾವಧಿಯನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುವುದನ್ನು ಮುಂದೆ ಕಾದು ನೋಡಬೇಕಿದೆ. ಈ ಬಾರಿಯಾದರೂ ನಿಯಮಗಳನ್ನು ಅನುಸರಿಸುತ್ತಾರೋ ಅಥವಾ ಉಲ್ಲಂಘನೆ ಮಾಡುತ್ತಾರೋ ಎಂಬುವುದು ಕೂತೂಹಲಕ್ಕೀಡಾಗಿದೆ.
ಸದನದ ಮಧ್ಯಂತರ ವರದಿಯನ್ನು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಮತ್ತೊಂದು ಬಾರಿ ರಾಜ್ಯಪಾಲರ ಆದೇಶ ಉಲ್ಲಂಘನೆ ಆದರೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎಂದು ಮಾಹಿತಿಗಳು ತಿಳಿಸಿದೆ.
ಈ ನಡುವೆ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ವಿಪ್ ಕುರಿತು ಯಾವುದೇ ಸ್ಪಷ್ಟವಾದ ಅಂಶವನ್ನು ತಿಳಿಸದ ಕಾರಣ ಈಗ ಕಾಂಗ್ರೆಸ್ ಮತ್ತೊಮ್ಮೆ ಈ ವಿಚಾರದ ಬಗ್ಗೆ ಕೋರ್ಟ್ ಸ್ಪಷ್ಟನೆ ನೀಡಬೇಕೆಂದು ಮನವಿ ಸಲ್ಲಿಸಿದೆ.