ಬೆಂಗಳೂರು, ಜು 19 (DaijiworldNews/SM): ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗಳು, ಹೊಸ ತಿರುವುಗಳು ನಡೆಯುತ್ತಿವೆ. ಮೈತ್ರಿ ಸರಕಾರ ಈಗಾಗಲೇ ಬಹುಮತ ಕಳೆದುಕೊಂಡಿದ್ದು, ಅಡ್ಡಗೋಡೆಯ ಮೇಲೆ ಬೀಪ ಎಂಬಂತೆ ಇಂದೋ ನಾಳೆಯೋ ಕುಸಿಯುವ ಭೀತಿಯಲ್ಲಿದೆ. ಆದರೆ, ಈ ನಡುವೆ ಮುಖ್ಯಮಂತ್ರಿಗಳು ಮಂಗಳವಾರದ ತನಕ ಬಹುಮತ ಸಾಬೀತುಪಡಿಸಲು ಮುಂದಾಗದಿದ್ದರೆ ಸೇಫ್ ಆಗಿರುತ್ತದೆ ಎಂಬುವುದಾಗಿ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ವಿಶ್ವಾಸ ಮತ ಯಾಚನೆಯನ್ನು ಮುಂದಿನ ಮಂಗಳವಾರ ದಾಟಿಸಿಬಿಟ್ಟರೆ ಬಳಿಕ ಬುಧವಾರದಂದು ಬಹುಮತ ಸಾಬೀತು ಪಡಿಸುವುದಾದರೆ ಕರ್ನಾಟಕದಲ್ಲಿ ಅಧಿಕಾರದಲ್ಲಿ ಇರುವ ಮೈತ್ರಿ ಸರಕಾರ ಉಳಿದುಕೊಂಡು ಬಿಡುತ್ತೆ ಎಂಬುವುದಾಗಿ ಸಿಎಂಗೆ ಸಲಹೆ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಕೂಡ ಸಿಎಂ ಅವರಿಗೆ ದೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ಮೇಲುನೋಟಕ್ಕೆ ಸಂಖ್ಯಾ ಬಲವೇ ಇಲ್ಲದ ಸರಕಾರ ರಾಜ್ಯದಲ್ಲಿದೆ. ಮಂಗಳವಾರ ಕಳೆದ ನಂತರ ಅದು ಹೇಗೆ ಉಳಿದುಕೊಳ್ಳುತ್ತದೆ ಎಂಬುದು ಪ್ರಶ್ನೆಯಾಗಿ ಉದ್ಭವಿಸುವುದು ಸಹಜ. ಆದರೆ ಜ್ಯೋತಿಷ್ಯರು ತಿಳಿಸಿರುವ ಲೆಕ್ಕಾಚಾರದ ಪ್ರಕಾರ ಸರಕಾರ ಉಳಿಯುತ್ತದೆ ಎನ್ನಲಾಗಿದೆ. ಆದರೆ, ಸಂಖ್ಯಾಬಲದ ಪ್ರಕಾರ ಇದು ಅಸಾಧ್ಯ ಮಾತಾಗಿದೆ. ಈ ನಡುವೆ ಮಂಗಳವಾರದ ತನಕ ಕಾಲಾವಕಾಶ ಇರುವುದರಿಂದ ಎನಾದರೂ ಕಸರತ್ತುಗಳಾನ್ನು ನಡೆಸಬಹುದು ಎನ್ನಲಾಗುತ್ತಿದೆ.
ಆದರೆ, ಸದ್ಯ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು, ಸೋಮವಾರ ಬಹುಮತ ಸಾಬೀತುಪಡಿಸಲೇ ಬೇಕು ಎಂದು ಸ್ಪೀಕರ್ ತಿಳಿಸಿದ್ದಾರೆ. ಆದರೆ, ಅಂತಿಮವಾಗಿ ಸೋಮವಾರವೇ ಬಹುಮತ ಸಾಬೀತು ಪಡಿಸುತ್ತಾರಾ? ಅಥವಾ ಮತ್ತೆ ಮುಂದೂಡಲಾಗುತ್ತದಾ ಎನ್ನುವುದು ಕುತೂಹಲದ ಸಂಗತಿಯಾಗಿದೆ. ಒಂದೊಮ್ಮೆ ಮಂಗಳವಾರವೂ ಮತ್ತದೇ ಪರಿಸ್ಥಿತಿ ಎದುರಾದರೆ, ಜ್ಯೋತಿಷಿಗಳು ನುಡಿದಿರುವ ಭವಿಷ್ಯ ನಿಜವಾಗುತ್ತದಾ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಆದರೆ, ಸರಕಾರವನ್ನು ಉರುಳಿಸಲು ಕಮಲ ಪಕ್ಷ ಮಾತ್ರ ತುದಿಗಾಲಲ್ಲಿ ನಿಂತಿದೆ.