ಬೆಂಗಳೂರು, ಜು 19 (DaijiworldNews/SM): ಸಾಕಷ್ಟು ಗದ್ದಲ ಗೊಂದಲದ ಬಳಿಕ ವಿಧಾನಸಭೆ ಅಧಿವೇಶನವನ್ನು ಸ್ಪೀಕರ್ ರಮೇಶ್ ಕುಮಾರ್ ಸೋಮವಾರಕ್ಕೆ ಮುಂದೂಡಿದ್ದು, ಮೈತ್ರಿ ಸರಕಾರಕ್ಕೆ ಒಂದಿಷ್ಟು ಉಸಿರಾಡಲು ಟೈಮ್ ಸಿಕ್ಕಂತಾಗಿದೆ.
ಇಂದು ಸಂಜೆ ನಿರಂತರ ಚರ್ಚೆಯ ಬಳಿಕ ಸದನದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಇನ್ನು ಹೆಚ್ಚು ಹೊತ್ತು ಇಲ್ಲಿ ಇರಲು ನನ್ನಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರಕ್ಕೆ ಮುಂದೂಡುತ್ತಿದ್ದು, ಸೋಮವಾರದಂದು ಇತ್ಯರ್ಥ ನಡೆಸಿದ ಬಳಿಕವೇ ಮನೆಗೆ ತೆರಳುವೆ ಎಂದು ತಿಳಿಸಿದ್ದಾರೆ.
ಇನ್ನು ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ಸಿಎಂ ಕುಮಾರಸ್ವಾಮಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದರು. ಆದರೆ, ಅದರ ಉಲ್ಲಂಘನೆಯಾಗಿದೆ. ಬಳಿಕ ಇಂದು ಸಂಜೆ 6 ಗಂಟೆಗೆ ಡೆಡ್ ಲೈನ್ ನೀಡಿದ್ದರು. ಅಲ್ಲೂ ಕೂಡ ಬಹುಮತವನ್ನು ಸಾಬೀತು ಪಡಿಸಲು ಕುಮಾರಸ್ವಾಮಿ ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇಂದೇ ಬಹುಮತ ಸಾಬೀತುಪಡಿಸಬೇಕೆಂದು ಸರಕಾರಕ್ಕೆ ಸ್ಪೀಕರ್ ಕೂಡ ತಿಳಿಸಿದ್ದರು. ಬಿಜೆಪಿ ನಾಯಕರು ಎಷ್ಟೇ ರಾತ್ರಿಯಾಗಲಿ ನಾನು ಇರುತ್ತೇವೆ. ಇಂದೇ ಬಹುಮತ ಸಾಬೀತುಪಡಿಸಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ಅಂತಿಮವಾಗಿ ರಾಜ್ಯ ಸರಕಾರದ ಹಟ ಗೆದ್ದಿದ್ದು, ಸದನ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.
ಇನ್ನು ಈ ನಡುವೆ ರಾಜ್ಯಪಾಲರಿಗೆ ಕೆಲವೊಂದು ಅಧಿಕಾರಗಳಿದ್ದು, ಅವುಗಳನ್ನು ಅವರು ಯಾವ ರೀತಿ ಬಳಸಿಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.