ಕೊಪ್ಪಳ, ಜು20(Daijiworld News/SS): ಎಲ್ಲ ಪಕ್ಷಗಳು ಒಂದಾಗಿ ಸರಕಾರ ರಚಿಸಲಿ. ಕರ್ನಾಟಕದಲ್ಲಿ ಮತ್ತೆ ಚುನಾವಣೆ ಆಗಬಾರದು ಎಂದು ಎಂದು ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ್ವ ತೀರ್ಥ ಶ್ರೀಗಳು ಹೇಳಿದ್ದಾರೆ.
ರಾಜ್ಯ ರಾಜಕೀಯ ಪರಿಸ್ಥಿತಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಿ ಬಿಡಲಿ. ಆಗಲಾದರೂ ರಾಜ್ಯ ಅಭಿವೃದ್ಧಿಯಾಗುವ ವಿಶ್ವಾಸ ಇದೆ. ಎಲ್ಲರೂ ಅಧಿಕಾರ ಗದ್ದುಗೆ ಏರಲು ಹಾತೊರೆಯುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಚುನಾವಣೆ ಆಗಬಾರದು. ರಾಷ್ಟ್ರಪತಿ ಆಡಳಿತವೂ ಬರಬಾರದು. ಸರ್ವಪಕ್ಷೀಯ ಸರಕಾರವೇ ರಚನೆ ಆಗಲಿ ಎಂದು ಹೇಳಿದ್ದಾರೆ.
ಈ ಹಿಂದೆ ಚುನಾವಣೆಗೆ ಮುನ್ನ ಎಲ್ಲ ಪಕ್ಷಗಳು ಬೈದಾಡಿಕೊಂಡಿದೆ. ವಾಕ್ಸಮರ ನಡೆಸಿದೆ. ನಂತರ ಒಂದಾಗಿ ಸರಕಾರ ರಚಿಸಿದೆ. ಈಗಲೂ ಜಗಳ ಮುಂದುವರಿದಿದೆ. ಹೀಗಾಗಿ ಎಲ್ಲ ಪಕ್ಷಗಳು ಒಂದಾಗಿ ಸರಕಾರ ರಚಿಸಲಿ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.
ಬಿಜೆಪಿ ಹಿಂದೂ ಪರ ಎಂದು ಮೈತ್ರಿ ಸರಕಾರ ರಚನೆ ಮಾಡಲಾಗಿದೆ. ಆದರೆ ಬಿಜೆಪಿ ಜಾತ್ಯತೀತ ಪಕ್ಷವೂ ಹೌದು. ಇದಕ್ಕಾಗಿ ಮೂರು ಪಕ್ಷ ಜತೆಯಾಗಿ ಸರಕಾರ ರಚಿಸಲಿ. ಆಗ ರೆಸಾರ್ಟ್ ರಾಜಕೀಯ, ಪಕ್ಷಾಂತರ ಬಂದ್ ಆಗುತ್ತವೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.