ಬೆಂಗಳೂರು, ಜು20(Daijiworld News/SS): ಭಾರೀ ಮಳೆಯಾಗುತ್ತಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಜು.23ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜು20ರಂದು ಜಿಲ್ಲೆಯ ಎಲ್ಲ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜು.20ರಿಂದ 22ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಸಲಾಗಿದ್ದು, ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಲು ಸೂಚಿಸಲಾಗಿದೆ.
ಬೆಂಗಳೂರಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮುಂದಿನ ಐದು ದಿನಗಳಲ್ಲಿ ಪ್ರತಿ ದಿನ 204.5 ಮಿ.ಮೀನಷ್ಟು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿದೆ. ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ವೃತ್ತಿಪರ ಕಾಲೇಜು ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜು.20ರಂದು ಜಿಲ್ಲಾಡಳಿತ ರಜೆ ಘೊಷಿಸಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.
ಉತ್ತರ ಕನ್ನಡದ ಹೊನ್ನಾವರ ಕೆಳಗಿನಪಾಳ್ಯ, ಭಟ್ಕಳದಲ್ಲಿ ಹಲವು ಮನೆಗಳಿಗೆ, ಕುಮಟಾದ ಸರಾಸರಿ 19.5 ಮಿ.ಮೀ. ಮಳೆಯಾಗಿದೆ. ಜು.22ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಬೆಳಗಾವಿ, ವಿಜಯಪುರ, ಗದಗ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಜು.21ರವರೆಗೆ ಭಾರಿ ಮಳೆ ನಿರೀಕ್ಷಿಸಲಾಗಿದೆ.