ಬೆಂಗಳೂರು, ಜು20(Daijiworld News/SS): ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕಂಪನಿ ಮಾಲೀಕ ಮನ್ಸೂರ್ ಖಾನ್'ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ಇದೀಗ ಕಿಂಗ್ ಪಿನ್ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್'ನನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಎಸ್ ಐಟಿ ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ.
ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ಪರಾರಿಯಾಗಿದ್ದ ಮನ್ಸೂರ್ ಖಾನ್'ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ರಾತ್ರಿ ದೆಹಲಿ ಕೋರ್ಟ್ ಎದುರು ಹಾಜರುಪಡಿಸಿದ್ದರು. ಇಂದು ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಶಾಂತಿನಗರದ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟ್ ಎದುರು ಅಧಿಕಾರಿಗಳು ಮನ್ಸೂರ್ ಖಾನ್ನನ್ನು ಹಾಜರು ಪಡಿಸಲಿದ್ದಾರೆ. ಈ ವೇಳೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸುವ ಸಾಧ್ಯತೆ ಇದೆ. ಪೊಲೀಸರ ಜೊತೆಗೆ ಎಸ್ಐಟಿ ಇಲಾಖೆಯವರು ಕೂಡ ತಮ್ಮ ವಶಕ್ಕೆ ನೀಡುವಂತೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್ ಭಾರತಕ್ಕೆ ಆಗಮಿಸುತ್ತಿರುವ ಖಚಿತ ಮಾಹಿತಿನ್ನು ಆಧರಿಸಿ ಎಸ್ಐಟಿ ಅಧಿಕಾರಿಗಳು ಗುರುವಾರ ಮಧ್ಯರಾತ್ರಿ 1.50 ಕ್ಕೆ ಮನ್ಸೂರ್ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ ಇರುವ ದೆಹಲಿಯ ಎಂಟಿಎನ್ಎಲ್ ಕಟ್ಟಡಕ್ಕೆ ಕರೆದೊಯ್ಯಲಾಗಿದ್ದು, ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಲಾಗಿತ್ತು.
ಐಎಂಎ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿತ್ತು. ಜಾರಿ ನಿರ್ದೇಶನಾಲಯ ಸಹ ದೂರು ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ನಡೆಸುತ್ತಿತ್ತು. ಇದುವರೆಗೂ ಮನ್ಸೂರ್ ಖಾನ್ ಮತ್ತು ಐಎಂಎ ವಿರುದ್ದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಂಚನೆ ದೂರು ದಾಖಲಾಗಿದೆ.