ಕಾಸರಗೋಡು, ಜು20(Daijiworld News/SS): ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಧೂರು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಹಾಗೂ ಸುತ್ತಲಿನ ಪ್ರದೇಶ ಜಲಾವೃತಗೊಂಡಿದೆ.
ನಿರಂತರ ಮಳೆಯಿಂದಾಗಿ ಮಧುವಾಹಿನಿ ನದಿ ತುಂಬಿ ಹರಿದು, ಸುತ್ತಲಿನ ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಧಾರಾಕಾರ ಮಳೆಯಾಗುವ ಹಿನ್ನೆಲೆಯಲ್ಲಿ, ರೆಡ್ ಅಲರ್ಟ್ ಘೋಷಿಸಲ್ಪಟ್ಟಿದ್ದ ಕೇರಳದ ಜಿಲ್ಲೆಗಳಾದ ಕಲ್ಲಿಕೋಟೆ, ಇಡುಕ್ಕಿ, ಮಲಪ್ಪುರಂ, ತ್ರಿಶೂರ್, ಎರ್ನಾಕುಳಂ, ಕೊಟ್ಟಾಯಂನಲ್ಲಿ ಗುರುವಾರದಿಂದ ಅಗಾಧವಾಗಿ ಮಳೆಯಾಗುತ್ತಿದೆ. ದಿನದಿಂದ ದಿನಕ್ಕೆ ಮುಂಗಾರು ತೀವ್ರತೆ ಪಡೆಯುತ್ತಿದ್ದು, ಗುರುವಾರ-ಶುಕ್ರವಾರ ಕಲ್ಲಿಕೋಟೆ ಹಾಗೂ ಇಡುಕ್ಕಿಯಲ್ಲಿ 14 ಸೆಂ.ಮೀ. ಮಳೆಯಾಗಿದ್ದರೆ, ಉಳಿದ ಜಿಲ್ಲೆಗಳ ಕೆಲ ಭಾಗಗಳಲ್ಲಿ 12 ಸೆಂ.ಮೀ. ಮಳೆ ಬಿದ್ದಿದೆ.
ಶುಕ್ರವಾರ, ಇಡುಕ್ಕಿ ಜಿಲ್ಲೆಯ ಇಟ್ಟುಮನೂರ್-ಪೀರುಮೆಂಡು ರಸ್ತೆಯಲ್ಲಿ ಅಲ್ಪ ಪ್ರಮಾಣದ ಭೂಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಟ್ಟಣಂತಿಟ್ಟ ಜಿಲ್ಲೆಯಲ್ಲಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವು 5 ದಿನಗಳ ಮಾಸಿಕ ಪೂಜೆಗಾಗಿ ತೆರೆಯಲ್ಪಟ್ಟಿದ್ದು, ದೇವರ ದರ್ಶನಕ್ಕಾಗಿ ಸಾಗರೋಪಾದಿಯಾಗಿ ಆಗಮಿಸುತ್ತಿರುವ ಭಕ್ತಾದಿಗಳಿಗೆ ಪಂಬಾ ಪ್ರಾಂತ್ಯದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಆಗಿರುವುದರಿಂದ ತೊಂದರೆಯಾಗಿತ್ತು. ಆದರೆ, ಶುಕ್ರವಾರ ಮಧ್ಯಾಹ್ನದ ನಂತರ ಪ್ರವಾಹದಲ್ಲಿ ಕೊಂಚ ಇಳಿಮುಖವಾಗುತ್ತಿದೆ.
ಜು.19ರಿಂದ 22ರಂದು ವಯನಾಡ್, ಮಲಪ್ಪುರಂ, ಕಣ್ಣೂರು ಜಿಲ್ಲೆಗಳಲ್ಲೂ ಅಗಾಧ ಮಳೆಯಾಗುತ್ತದೆ ಎಂದಿರುವ ಹವಾಮಾನ ಇಲಾಖೆ ಆ ಜಿಲ್ಲೆಗಳನ್ನೂ ರೆಡ್ ಅಲರ್ಟ್ ವ್ಯಾಪಿಗೆ ತಂದಿತ್ತು. ಹಾಗಾಗಿ, ಅಲ್ಲಿಯೂ ಹೆಚ್ಚು ಮಳೆಯ ನಿರೀಕ್ಷೆ ಇದೆ.