ಅಲಹಾಬಾದ್, ಜು 20 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಮೋದಿ ವಾರಣಾಸಿ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅರ್ಜಿ ಸಲ್ಲಿಸಿದ್ದರು.
ಮಾಜಿ ಬಿಎಸ್ಎಫ್ ಜವಾನ್ ತೇಜ್ ಬಹದ್ದೂರ್ ಯಾದವ್ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ವಿರುದ್ದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಅವರ ನಾಮಪತ್ರ ಚುನಾವಣಾ ಆಯೋಗ ತಿರಸ್ಕರಿಸಿತ್ತು. ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದ ವಿಚಾರವಾಗಿ ಸೇನೆಯಿಂದ ವಜಾಗೊಂಡಿಲ್ಲ ಎಂಬುದಕ್ಕೆ ದಾಖಲೆ ನೀಡಲು ವಿಫಲವಾಗಿದ್ದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು.
ಆದರೆ ಉದ್ದೇಶಪೂರ್ವಕವಾಗಿಯೇ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ತೇಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕಾರಣಕ್ಕೆ ವಾರಣಾಸಿಯಿಂದ ಮೋದಿಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು, ಯಾದವ್ ಅವರ ನಾಮಪತ್ರಗಳನ್ನು ತಿರಸ್ಕರಿಸುವ ಮೊದಲು ವಿಚಾರಣೆಗೆ ಅವಕಾಶ ನೀಡಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಕೆ.ಗುಪ್ತಾ, ಈ ಬಗ್ಗೆ ಉತ್ತರಿಸುವಂತೆ ಪ್ರಧಾನಿ ಮೋದಿಗೆ ನೋಟಿಸ್ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 21ರಂದು ಮುಂದೂಡಿದೆ.