ನವದೆಹಲಿ, ಜು20(Daijiworld News/SS): ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು 9 ತಿಂಗಳ ಒಳಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಸಿಬಿಐ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಡಾ.ಮುರಳಿ ಮನೋಹರ ಜೋಷಿ ಮತ್ತು ಇತರರ ವಿರುದ್ಧದ ವಿಚಾರಣೆಯನ್ನು ಜು.19ರಿಂದ ಅನ್ವಯವಾಗುವಂತೆ ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ನ ವಿಭಾಗೀಯ ನ್ಯಾಯಪೀಠ, ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲಖನೌ ವಿಚಾರಣಾ ನ್ಯಾಯಾಲಯದ ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ್ ಅವರ ಅಧಿಯನ್ನು ವಿಸ್ತರಿಸುವಂತೆ ಸೂಚಿಸಿದೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳು ಕಾಲಾವಧಿ ಕೋರಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಎಚ್.ಕೆ.ಯಾದವ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರದಿದ್ದರು. ತಾವು ಬರುವ ಸೆಪ್ಟೆಂಬರ್ 30, 2019 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಮಯ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.
ಆರು ತಿಂಗಳಲ್ಲಿ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿರುವ ಸರ್ವೋಚ್ಛ ನ್ಯಾಯಾಲಯ, ಮೌಖಿಕ ವಾದಗಳನ್ನು ಆದಷ್ಟೂ ಕಡಿಮೆ ಮಾಡಬೇಕು ಎಂದು ಹೇಳಿದೆ.
ಸದ್ಯ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಧ್ವಂಸಗೊಳಿಸದ ಆರೋಪದ ಮೇಲೆ ಅಡ್ವಾಣಿ, ಜೋಶಿ ಮತ್ತು ಇತರರ ವಿರುದ್ಧ ಲಖನೌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.