ಬೆಂಗಳೂರು, ಜು 20 (Daijiworld News/MSP): ಪ್ರಾಮಾಣಿಕನಲ್ಲದಿದ್ದರೂ ಭ್ರಷ್ಟಚಾರನಲ್ಲ ಎಂಬ ಮಾತನ್ನು ಜೆಡಿಎಸ್ ನ ಹಿರಿಯ ನಾಯಕ ಎಚ್. ವಿಶ್ವನಾಥ್ ಹಲವು ಬಾರಿ ಹೇಳಿದ್ದರು. ಮಾತ್ರವಲ್ಲದೆ ಇದೇ ಮಾತನ್ನು ವಿಶ್ವನಾಥ್ ಜೆಡಿಎಸ್ಗೆ ಸೇರುವಾಗ ಹೇಳಿಕೊಂಡಿದ್ದರು. ನೀವು ಹೇಳಿದಂತೆ ತಾವೊಬ್ಬ "ಶುದ್ದಹಸ್ತರು " ಎಂಬುದನ್ನು ಸದನಕ್ಕೆ ಹಾಜರಾಗಿ ಸಾಬೀತುಪಡಿಸಿ ಎಂದು ಎಚ್. ವಿಶ್ವನಾಥ್ ಅವರಿಗೆ ಸಚಿವ ಸಾ.ರಾ ಮಹೇಶ್ ಬಹಿರಂಗ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂಬತ್ತು ಬಾರಿ ಚುನಾವಣೆ ಎದುರಿಸಲು ನಿಮಗೆ ಹಣ ಎಲ್ಲಿಂದ ಬಂತು? ನೀವು ರಾಜಕೀಯ ಶುದ್ದಹಸ್ತರಾಗಿದ್ದಲ್ಲಿ ಯಾಕೆ ವಿಶೇಷ ವಿಮಾನದಲ್ಲಿ ತೆರಳಿ ದಿಲ್ಲಿಯಲ್ಲಿ ಕುಳಿತಿದ್ದೀರಿ? ಎಂದು ವಿಶ್ವನಾಥ್ ಅವರನ್ನು ಕುಟುಕಿದರು.
ನೀವು ಕಳಂಕರಹಿತ ಎಂದು ಸಾಬೀತುಪಡಿಸಲು ಅಂತಿಮ ದಿನ ಸೋಮವಾರ. ಹೀಗಾಗಿ ಅಂದು ನೀವು ಸದನಕ್ಕೆ ಹಾಜರಾಗಿ ಅಂದು ನೀವು ನನಗೆ ಷರತ್ತು ಹಾಕಿದ್ರೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಮಾತ್ರವಲ್ಲದೆ ಅಂದೇ ಬೇಕಿದ್ದರೆ ನಾನು ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ನಮ್ಮ ಜೆಡಿಎಸ್ ನಾಯಕರಿಗೆ ಇಂದು ಈ ಸ್ಥಿತಿಗೆ ಬರಲು ಪರೋಕ್ಷವಾಗಿ ನಾನೇ ಕಾರಣನಾಗಿದ್ದೇನೆ ಯಾಕೆಂದರೆ ವಿಶ್ವನಾಥ್ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಿ.ಟಿ ದೇವೇಗೌಡ ಸೇರಿದಂತೆ ಹಲವರ ಅಸಮ್ಮತಿ ಇತ್ತು. ನಾನು ಅಂದು ಅವರ ಮಾತು ಕೇಳಿದ್ದರೆ ಇವತ್ತು ನಮ್ಮ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.