ಬೆಂಗಳೂರು, ಜು20(Daijiworld News/SS): ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ನಿಮಗಿಲ್ಲ. ನೈತಿಕತೆ ಇದ್ದರೆ ಅಧಿಕಾರದಿಂದ ಇಳಿದು ಬಿಟ್ಟುಹೋಗಿ. ರಾಜ್ಯಪಾಲರ ಸೂಚನೆಗಳಿಗೆ ಕ್ಯಾರೇ ಅನ್ನುತ್ತಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಅದಕ್ಕೂ ಆದ್ಯತೆ ನೀಡುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ, ಸ್ವತಃ ಶ್ರೀಮಂತ್ ಪಾಟೀಲ್ ಅವರು ತಮ್ಮನ್ನು ಯಾರೂ ಅಪಹರಿಸಿಲ್ಲ ಎಂದು ವಿಡಿಯೋ ಮತ್ತು ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಎಸ್ ಆರ್ ವಿಶ್ವನಾಥ್, ಅತೃಪ್ತ ಶಾಸಕರು ಬರುವವರೆಗೂ ನಾವು ಸದನವನ್ನು ನಡೆಸುವುದಿಲ್ಲ ಎಂಬ ದೋಸ್ತಿ ನಾಯಕರ ಧೋರಣೆ ಸರಿಯಿಲ್ಲ. ಇದೊಂದು ರೀತಿಯ ಲಜ್ಜೆಗೆಟ್ಟ ಸರ್ಕಾರ. ಸದನವನ್ನು ನಡೆಸಲು ಅವರಿಗೆ ಆಸಕ್ತಿ ಇಲ್ಲ. ಅತೃಪ್ತ ಶಾಸಕರು ಬರುವ ಹಾಕಿದ್ದರೆ ಅವರನ್ನು ಕರೆದುಕೊಂಡು ವಿಶ್ವಾಸಮತ ಯಾಚಿಸಲಿ. ಸಮ್ಮನೆ ಕಾಲಹರಣ ಮಾಡುವುದು ಸರಿಯಲ್ಲ. ಅತೃಪ್ತರ ಮನವೊಲಿಸ್ತಾರೋ ಇಲ್ಲವೋ ಗೊತ್ತಿಲ್ಲ. ಈ ಆಟಗಳನ್ನೆಲ್ಲ ಜನರು ನೋಡುತ್ತಿದ್ದಾರೆ. ನೈತಿಕತೆ ಇದ್ದರೆ ಸೋಮವಾರ ವಿಶ್ವಾಸಮತ ಯಾಚಿಸಲಿ ಎಂದು ಒತ್ತಾಯಿಸಿದರು.