ಪುಣೆ, ಜು 20 (Daijiworld News/RD): ಪ್ರಾಣ ತೆಗೆಯುವ ಅಪಾಯಕಾರಿ ಬ್ಲೂವೇಲ್ ಆನ್ಲೈನ್ ಗೇಮ್ ಟಾಸ್ಕ್ ಗೆ 20 ವರ್ಷದ ದಿವಾಕರ್ ಮಾಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನೇಣು ಬಿಗಿದುಕೊಂಡು ಸಾವನ್ನಪ್ಪಿದ ಈ ಯುವಕನನ್ನು ಲೋನಿಖಂಡ್ ನಗರ ಪ್ರದೇಶದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಕಳೆದ ಕೆಲವು ತಿಂಗಳಿಂದ ಬ್ಲೂವೇಲ್ ಗೇಮ್ ಆಡುತ್ತಿದ್ದು, ಈತ ತನ್ನ ಹೆಚ್ಚಿನ ಸಮಯವನ್ನು ಮೊಬೈಲ್ ಅಲ್ಲೇ ಕಳೆಯುತ್ತಿದ್ದ ಎಂದು ಪೋಷಕರು ಹೇಳಿದರು. ಸಾಕಷ್ಟು ಬಾರಿ ಆತನಿಗೆ ಸೂಚನೆ ನೀಡಿದರೂ ನಿರ್ಲಕ್ಷ್ಯ ಮಾಡುತ್ತಿದ್ದ ಎಂದು ತಿಳಿಸಿದರು.
ನೇಣಿಗೆ ಶರಣಾಗುವ ಮುನ್ನ ದಿವಾಕರ್ ಮಾಲಿ ಪತ್ರ ಬರೆದಿದ್ದು, ಆ ಪತ್ರದಲ್ಲಿ ಪಂಜರದಲ್ಲಿದ್ದ ಕರಿ ಚಿರತೆ ಈಗ ಸ್ವತಂತ್ರವಾಗಿದೆ. ಈಗ ಅದರ ಮುಂದೆ ಯಾವುದೇ ನಿರ್ಬಂಧಗಳು ಇಲ್ಲ. ಇದು ನನ್ನ ಅಂತ್ಯ ಎಂದು ಹೇಳಿದ್ದಾನೆ, ಎಂದು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು. ದಿವಾಕರ್ ಮಾಲಿ, ಬರೆದ ಪತ್ರ ಇಂಗ್ಲಿಷ್ ಹಾಗೂ ಮರಾಠಿ ಭಾಷೆಯಲ್ಲಿ ಇದ್ದು. ಅದರ ಮೇಲೆ ಕರಿ ಚಿರತೆಯ ಚಿತ್ರ ಬಿಡಿಸಿ ಸೂರ್ಯ ಮತ್ತೆ ಹೊಳೆಯುತ್ತಾನೆ ಎಂದು ಬರೆಯುವ ಮೂಲಕ ತನ್ನನ್ನು ತಾನು ಕಪ್ಪು ಚಿರತೆಗೆ ಹೋಲಿಸಿದ್ದಾನೆ.
ಈ ಕುರಿತು ಮಾತನಾಡಿರುವ ಮಾಲಿ ತಾಯಿ, ಎಲ್ಲ ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರಬೇಕೆಂದು ನಾನು ಮನವಿ ಮಾಡುತ್ತೇನೆ. ನಾನು ನನ್ನ ಮಗನನ್ನು ಕಳೆದುಕೊಂಡೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸಿ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ರಷ್ಯಾದಲ್ಲಿ ಆರಂಭವಾದ ಬ್ಲೂವೇಲ್ ಆಟ ಇಂದು ವಿಶ್ವದಾದ್ಯಂತ ಹಬ್ಬಿದೆ. ಈ ಆಟವು ಅನೇಕ ಸವಾಲುಗಳನ್ನು ನೀಡುತ್ತಾ ಜೀವಕ್ಕೆ ಕಂಟಕ ನೀಡಿ ಈಗಾಗಲೇ ಅನೇಕರ ಬಲಿ ತೆಗೆದುಕೊಂಡಿದೆ.