ಬೆಂಗಳೂರು, ಜು20(Daijiworld News/SS): ಸರಕಾರಕ್ಕೆ ವಿಶ್ವಾಸ ಇರುವ ಕಾರಣಕ್ಕೆ ವಿಶ್ವಾಸಮತಯಾಚನೆಗೆ ಮುಂದಾಗಿದೆ ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿ ಇದ್ದರೂ ಕೆಲಸ ಮಾಡಬೇಕು. ಅಧಿಕಾರ ಹೋದರೂ ಕೆಲಸ ಮಾಡಬೇಕು. ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರಕ್ಕೆ ವಿಶ್ವಾಸ ಇರುವ ಕಾರಣಕ್ಕೆ ವಿಶ್ವಾಸಮತಯಾಚಿಸಲು ಮುಂದಾಗಿದೆ. ಆದರೆ, ಬಿಜೆಪಿಯವರೇಕೆ ಖುಷಿ ಪಡುತ್ತಾರೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಜು.22ರ ಸೋಮವಾರ ವಿಶ್ವಾಸಮತಯಾಚನೆ ಇದೆ. ಸದನದಲ್ಲಿ ಆಡಳಿತ ಪಕ್ಷದ ಕೆಲ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಶೃಂಗೇರಿ ಶಾಸಕ ರಾಜೀಗೌಡ, ನಮ್ಮ ನಾಯಕರು ನಮ್ಮನ್ನು ಫ್ರೀ ಬಿಟ್ಟಿದ್ದಾರೆ. ಸೋಮವಾರ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಇದರಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಬಹುಮತ ಇರುವ ಯಾವುದೇ ಪಕ್ಷ ಸರಕಾರ ರಚನೆ ಮಾಡಲಿ. ಆದರೆ, ಮತ್ತೊಮ್ಮೆ ಚುನಾವಣೆ ಆಗುವುದು ಬೇಡ ಎಂದು ಶಾಸಕ ರಾಜೇಗೌಡ ಮನವಿ ಮಾಡಿದ್ದಾರೆ.