ಬೆಂಗಳೂರು, ಜು20(Daijiworld News/SS): ಒಂದೊಮ್ಮೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಅದಕ್ಕೆ ಮೈತ್ರಿ ಸರ್ಕಾರವೇ ನೇರ ಕಾರಣ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ನಿರ್ದೇಶನಕ್ಕೂ ಡೋಂಟ್ ಕೇರ್ ಎಂದಿರುವ ಮೈತ್ರಿ ಸರ್ಕಾರ ಯಾವ ನಿರ್ದೇಶನಕ್ಕೂ ಬಗ್ಗುತ್ತಿಲ್ಲ. ಒಂದೊಮ್ಮೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ ಅದಕ್ಕೆ ಮೈತ್ರಿ ಸರ್ಕಾರವೇ ನೇರ ಕಾರಣ. ರಾಜ್ಯಪಾಲರು ಕೇಂದ್ರಕ್ಕೆ ವರದಿ ಕೊಟ್ಟಿದ್ದಾರೆ. ಮೈತ್ರಿ ಪಕ್ಷಗಳು ಸುಪ್ರೀಂಕೋರ್ಟ್'ಗೆ ಹೋದರೂ ಪ್ರಯೋಜನ ಇಲ್ಲ ಎಂದು ಹೇಳಿದರು.
ಈ ಹಿಂದೆ ರಾಜ್ಯಪಾಲರು ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಮಾಡಲು ಸಮಯ ಕೊಟ್ಟಿದ್ದರು. ಅಂದು ಬಿಎಸ್ವೈ ರಾಜ್ಯಪಾಲರು ನಿಗದಿ ಮಾಡಿದ್ದ ಸಮಯದಲ್ಲೇ ನಿಯಮವನ್ನು ಪಾಲಿಸಿದ್ದರು. ಆದರೆ ಈ ಸರ್ಕಾರ ರಾಜ್ಯಪಾಲರ ಸಂದೇಶಗಳನ್ನು ಗೌರವಿಸಿಲ್ಲ. ಈ ಸರ್ಕಾರಕ್ಕೆ ಬಹುಮತ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯುವುದು ಯಾರಿಗೂ ಇಷ್ಟ ಇಲ್ಲ. ರಾಜ್ಯದ ರಾಜಕೀಯ ಬಿಕ್ಕಟ್ಟು ನೋಡಿ ರಾಷ್ಟ್ರಪತಿಯವರೇ ಮಧ್ಯ ಪ್ರವೇಶ ಮಾಡಬಹುದು. ಈಗಾಗಲೇ ರಾಜ್ಯಪಾಲರು ವರದಿಯನ್ನು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ವಿಶ್ವಾಸಮತ ಮಂಡನೆಗೆ ಶುಕ್ರವಾರ ಮಧ್ಯಾಹ್ನ 1.30ರವರೆಗೆ ಗಡುವು ನೀಡಲಾಗಿತ್ತು. ಆದರೆ ಸರ್ಕಾರವು ಅದನ್ನು ಪಾಲಿಸಿರಲಿಲ್ಲ. ಬಳಿಕ ರಾಜ್ಯಪಾಲರು ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿಸಿದರು.
ಜು.22ರ ಸೋಮವಾರ ಈ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಮತ್ತೊಮ್ಮೆ ಚುನಾವಣೆಗೆ ಹೋಗಲು ಯಾರಿಗೂ ಇಷ್ಟ ಇಲ್ಲ. ಒಂದುವೇಳೆ ರಾಷ್ಟ್ರಪತಿ ಆಡಳಿತ ಬಂದರೆ ಅದು ಈ ಸರ್ಕಾರದ ಮೊಂಡುತನದಿಂದಲೇ ಬರಬಹುದು ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.