ಬೆಂಗಳೂರು, ಜ. 22 (DaijiworldNews/AK): ಮನ್ರೇಗಾ ಕುರಿತು ಸುಳ್ಳು ಮತ್ತು ಅಸತ್ಯವನ್ನು ಮಾನ್ಯ ರಾಜ್ಯಪಾಲರ ಮೂಲಕ ಹೇಳಿಸಲು ಕರ್ನಾಟಕ ಸರಕಾರ ಬಯಸಿತ್ತು. ಕಾಂಗ್ರೆಸ್ ಪಕ್ಷವು ಸುಳ್ಳಿನ ಯಂತ್ರ ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಆರೋಪಿಸಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳಿನ ಯಂತ್ರ, ಭ್ರಮೆಯ ಅಂಗಡಿ ಆಗಿದೆ ಎಂದು ಆಕ್ಷೇಪಿಸಿದರು. ಕರ್ನಾಟಕದ ವಿಧಾನಸಭೆಯಲ್ಲಿ ಇಂದು ಪ್ರಜಾಸತ್ತಾತ್ಮಕ ಮೌಲ್ಯಗಳ ಕೊಲೆ ಆಗಿದೆ. ಸಂವಿಧಾನಕ್ಕೂ ಧಕ್ಕೆ ಮಾಡಿದ್ದಾರೆ ಎಂದು ಟೀಕಿಸಿದರು.
ಗವರ್ನರ್ ಅವರ ಭಾಷಣದಲ್ಲಿ ಸುಳ್ಳುಗಳಿದ್ದವು. ಅದನ್ನು ಓದಲು ಸಾಧ್ಯ ಇರಲಿಲ್ಲ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಎಂದರೆ ಕಮಿಷನ್, ಭ್ರಷ್ಟಾಚಾರ ಮತ್ತು ಕೆಟ್ಟ ಶಾಸನದ ಗ್ಯಾರಂಟಿ ಕೊಡುವ ಪಕ್ಷ ಎಂದು ದೂರಿದರು. ತನ್ನ ವೈಫಲ್ಯ, ಅಸಫಲತೆಯನ್ನು ಮುಚ್ಚಿಡಲು ಅದು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮನ್ರೇಗಾದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಭ್ರಷ್ಟಾಚಾರದ ವಿವರ ನೀಡಿದ ಅವರು, ಯಾದಗಿರಿ ಜಿಲ್ಲೆಯಲ್ಲಿ ನಡೆದ ಭ್ರಷ್ಟಾಚಾರವು ದೇಶ- ಅಂತರರಾಷ್ಟ್ರೀಯ ಸುದ್ದಿಯಾಗಿ ಪ್ರಕಟವಾಗಿತ್ತು ಎಂದು ಪತ್ರಿಕಾ ತುಣುಕನ್ನು ಪ್ರದರ್ಶಿಸಿದರು. ಪುರುಷರು ಸೀರೆ ಧರಿಸಿ, ಮಹಿಳೆಯಾಗಿ ಮನ್ರೇಗಾದ ಹಣ ಲೂಟಿ ಮಾಡಿದ್ದರು ಎಂದು ವಿವರಿಸಿದರು.
ಇಂಥ ನೂರಾರು ಭ್ರಷ್ಟಾಚಾರ ಪ್ರಕರಣಗಳು ಸೋಷಿಯಲ್ ಆಡಿಟ್ ಮೂಲಕ ಬಹಿರಂಗವಾಗಿವೆ. ಇದನ್ನು ರಾಜ್ಯ ಸರಕಾರಕ್ಕೆ ತಿಳಿಸಿದಾಗ, 107.78 ಕೋಟಿಯ ವಸೂಲಿ ಮಾಡಲು ಅವಕಾಶವಿದ್ದರೂ 3,551 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಡಿಸಿದರು. ಇಲ್ಲಿ ಪಾರದರ್ಶಕತೆ ಉಳಿದಿಲ್ಲ ಎಂದು ದೂರಿದರು.
ಸಿಎಜಿ ವರದಿಯಲ್ಲಿ ಲೋಕಪಾಲರು 24.12 ಕೋಟಿಯ ಹಣ ವಸೂಲಿಗೆ ಸೂಚಿಸಿದ್ದರು. ಆದರೆ, 2.47 ಕೋಟಿ ರೂ. ಮೊತ್ತವನ್ನಷ್ಟೇ ವಸೂಲಿ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸರಕಾರದ ಈ ಕ್ರಮಕ್ಕೆ ನಾನೇನು ಹೇಳಲಿ ಎಂದು ಪ್ರಶ್ನಿಸಿದರು. ಕಲಬುರ್ಗಿ ಜಿಲ್ಲೆಯಲ್ಲಿ ನಡೆದ ಅವ್ಯವಹಾರದ ದೂರು ಬಂದಿತ್ತು. ನನ್ನ ಸಚಿವಾಲಯವು ತಂಡವನ್ನು ಕಳಿಸಿತ್ತು. 2024-25ರಲ್ಲಿ ಕಲಬುರ್ಗಿ ಜಿಲ್ಲೆಯ ಆಳಂದದ 5 ಗ್ರಾಮ ಪಂಚಾಯಿತಿಗಳಲ್ಲಿ 21 ಕೆಲಸಗಳನ್ನು ನಿರ್ವಹಿಸಬೇಕಿತ್ತು. ಅವುಗಳ ಪರಿಶೀಲನೆ ಮಾಡಿದ್ದರು. ಮನುಷ್ಯರ ಬದಲಾಗಿ ಯಂತ್ರದಿಂದ ಕೆಲಸ ನಡೆದಿತ್ತು. ನಕಲಿ ದಾಖಲೆಗಳು ಪತ್ತೆಯಾದವು. ಕಳೂರು ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾಲಯದ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದನ್ನು ಶೌಚಾಲಯದ ನಿರ್ಮಾಣ ಎಂದು ತೋರಿಸಲಾಗಿತ್ತು ಎಂದು ವಿವರಿಸಿದರು.
ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದ ಅನೇಕ ಉದಾಹರಣೆಗಳಿವೆ ಎಂದು ತಿಳಿಸಿದರು. ಒಂದೇ ಕಾಮಗಾರಿಯನ್ನು ವಿಭಜಿಸಿ, ಪ್ರತ್ಯೇಕ ಕಾಮಗಾರಿ ಎಂದು ತೋರಿಸಿ ಹಣ ಪಡೆದಿದ್ದಾರೆ. ದಾಖಲೆಯಲ್ಲಿ ಮಾತ್ರ ಕಾಮಗಾರಿ ಇದ್ದು, ಕಾಮಗಾರಿ ಅನುಷ್ಠಾನ ಮಾಡದೇ ಹಣ ಲೂಟಿ ಮಾಡಿದ ಅನೇಕ ಉದಾಹರಣೆಗಳಿವೆ. ಅವುಗಳ ದಾಖಲೆಯನ್ನು ಮಾಧ್ಯಮಗಳಿಗೆ ನೀಡುವುದಾಗಿ ತಿಳಿಸಿದರು.