ಲಕ್ನೋ, ಜು 20 (Daijiworld News/RD): ಉತ್ತರ ಪ್ರದೇಶದ ಸೋನ್ಭದ್ರಾ ನಡೆದ ಜಮೀನು ವಿವಾದ ಗಲಾಟೆಯಲ್ಲಿ ಗ್ರಾಮದ ಮುಖ್ಯಸ್ಥನಾಗಿದ್ದ ಯಾಗ್ಯ ದತ್ ಹಾಗೂ ಅಲ್ಲಿದ್ದ 10 ಆದಿವಾಸಿ ಕುಟುಂಬಗಳು ಗುಂಡೇಟಿಗೆ ತುತ್ತಾಗಿ, 10 ಜನರು ಸಾವನ್ನಪ್ಪಿದ್ದು, 19 ಜನ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ಬಗ್ಗೆ ತಿಳಿದು ಸಂತ್ರಸ್ಥರನ್ನು ಭೇಟಿ ಮಾಡಲು ಹೋದ ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿಯನ್ನು ಅಲ್ಲಿನ ಪೊಲೀಸರು ತಡೆದು ವಶಕ್ಕೆ ಪಡೆದುಕೊಳ್ಳಲು ಮುಂದಾದಾಗ ಮಿರ್ಜಾಪುರದ ಚುನಾರ್ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡೇ ಧರಣಿ ನಡೆಸಿ, ಧರಣಿಗೆ ಮಣಿದ ಪೊಲೀಸರು ಇಂದು ಭೇಟಿಗೆ ಅವಕಾಶ ಮಾಡಿಕೊಟ್ಟರು. ಸಂತ್ರಸ್ಥರಿಗೆ ಸಾಂತ್ವನದ ಜೊತೆಗೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಪ್ರಿಯಾಂಕ ಗಾಂಧಿ ನೀಡಿದರು.
ಮೃತ ಕುಟುಂಬದ 15 ಜನ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು ಬಂದಿದ್ದು, ಘಟನೆ ನಡೆದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಹೀಗಾಗಿ ಪ್ರಿಯಾಂಕಾ ಗಾಂಧಿ ಸಂತ್ರಸ್ತರನ್ನು ಭೇಟಿಯೇ ಸಿದ್ಧ ಎಂದು ಪಟ್ಟು ಹಿಡಿದು ಶನಿವಾರವೂ ಪ್ರತಿಭಟನೆ ನಡೆಸಿದರು.
ಯಾಗ್ಯ ದತ್ ಉಭಾ ಗ್ರಾಮದ ಸಮೀಪದ ಘೋರ್ವಾಲ್ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ 36 ಎಕರೆ ಕೃಷಿ ಜಮೀನನ್ನು ಖರೀದಿಸಿದ್ದರು. ಆದರೆ ಯಾಗ್ಯ ದತ್ ತನ್ನ ಸಹಚರರ ಜೊತೆ ಬುಧವಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋಗಿದ್ದ. ಇದಕ್ಕೆ ಗ್ರಾಮಸ್ಥರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಗಲಾಟೆ ಆರಂಭವಾಗುತ್ತಿದ್ದಂತೆ ಯಾಗ್ಯ ದತ್ ಕಡೆಯ ವ್ಯಕ್ತಿಯೊಬ್ಬ ಒಂದೇ ಸಮನೆ ಗುಂಡಿನ ದಾಳಿ ನಡೆಸಿದ್ದಾನೆ. ಈ ರೀತಿಯ ಗುಂಡಿನ ದಾಳಿಗೆ 10 ಜನರು ಸ್ಥಳದಲ್ಲಿ ಅಸುನೀಗಿ, 19 ಜನರ ಸ್ಥಿತಿ ಗಂಭೀರವಾಗಿದೆ.
ಈ ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಂಡಿಸಿದ್ದು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಜನರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ 15 ಸಂತ್ರಸ್ಥ ಕುಟುಂಬಗಳ ಪೈಕಿ ಮೂರು ಕುಟುಂಬಸ್ಥರನ್ನು ಮಾತ್ರ ಭೇಟಿಯಾಗಲು ಸಾಧ್ಯವಾಗಿದ್ದು, ಪೊಲೀಸರು ಉದ್ದೇಶಪೂರ್ವಕವಾಗಿ ತಮ್ಮನ್ನು ಭೇಟಿಯಾಗಲು ಬಂದ ಸಂತ್ರಸ್ಥ ಕುಟುಂಬಸ್ಥರನ್ನು ತಡೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಗುಂಡ ರಾಜ್ಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಮಾಧ್ಯಮಗಳು ಉತ್ತರ ಪ್ರದೇಶದ ಈ ಸ್ಥಿತಿಯನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.