ಹುಬ್ಬಳ್ಳಿ, ಜ. 23 (DaijiworldNews/TA): ನಗರದ ಪ್ರಮುಖ ವ್ಯಾಪಾರ ಪ್ರದೇಶದಲ್ಲಿರುವ ಸುಖಸಾಗರ ಮಾಲ್ನಲ್ಲಿ ರಾತ್ರಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಮಾಲ್ನ ನಾಲ್ಕನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು, ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಸುತ್ತಮುತ್ತಲಿನ ವಸತಿ ಕಟ್ಟಡಗಳಿಗೂ ಬೆಂಕಿ ಹರಡುವ ಭೀತಿ ಉಂಟಾಗಿತ್ತು ಎನ್ನಲಾಗಿದೆ.

ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಸೆಕ್ಯೂರಿಟಿ ಗಾರ್ಡ್ ಸೋಮಶೇಖರ್ ಮತ್ತು ಅವರ ಪತ್ನಿ ವೀರುಬಾಯಿಯನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದರು. ಜೋರಾದ ಸದ್ದು ಮತ್ತು ಹೊತ್ತಿಕೊಂಡ ಬೆಂಕಿಯ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿಯ ಶ್ರಮ ಮತ್ತು ಸಮಯೋಚಿತ ಕ್ರಮದಿಂದ ಬೆಂಕಿ ಸುಮಾರು ನಾಲ್ಕು ಗಂಟೆಗಳಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.
ಸುಖಸಾಗರ ಮಾಲ್ನಲ್ಲಿ ಸುಮಾರು 250ಕ್ಕೂ ಹೆಚ್ಚು ಅಂಗಡಿಗಳು - ಬಟ್ಟೆ, ಪಾದರಕ್ಷೆ ಮತ್ತು ಕಾಸ್ಮೆಟಿಕ್ ವಸ್ತುಗಳ ಅಂಗಡಿಗಳು - ಇದ್ದವು. ಅದರಲ್ಲಿಯೂ ನಾಲ್ಕನೇ ಮಹಡಿಯಲ್ಲಿದ್ದ ಸಂಗ್ರಹಿತ ವಸ್ತುಗಳು ಬೆಂಕಿಗೆ ಸಿಲುಕಿದ್ದು, ಹಾನಿಯನ್ನು ಹೆಚ್ಚಿಸಿದೆ. ಮಾಲ್ ಮೊದಲೇ ಎರಡು ಬಾರಿ ಅಗ್ನಿ ಅವಘಡಕ್ಕೆ ಗುರಿಯಾಗಿದ್ದು, ಈ ಬಾರಿ ಕೂಡ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆಯು ತೀವ್ರ ಹಾನಿಗೆ ಕಾರಣವಾಗುತ್ತಿದೆ ಎಂಬ ವಿಮರ್ಶೆ ಹೊರಬಂದಿದೆ.
ಮಾಲ್ ಸುತ್ತಲಿನ ವಸತಿ ಕಟ್ಟಡಗಳ ನಿವಾಸಿಗಳು ಭಯದಿಂದ ಓಡಿ ಹೊರಗೆ ಬಂದರು. ಅಗ್ನಿಶಾಮಕ ಸಿಬ್ಬಂದಿಯ ಶ್ರಮದಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದರೂ, ಮಾಲ್ನಲ್ಲಿ ವ್ಯಾಪಾರ ನಡೆಸುತ್ತಿರುವ ಅನೇಕ ಕುಟುಂಬಗಳು ಹಾನಿಯಿಂದ ಕಂಗಾಲಾಗಿದ್ದು, ಮಾಲ್ ಪುನರ್ನಿರ್ಮಾಣದವರೆಗೆ ಉದ್ಯೋಗವಿಲ್ಲದೆ ಪರದಾಡಬೇಕಾಗುವಂತಾಗಿದೆ.