ಬೆಂಗಳೂರು, ಜ. 23 (DaijiworldNews/TA): ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದ ವಿಶೇಷ ತನಿಖಾ ತಂಡಕ್ಕೆ ಕೇಂದ್ರ ಗೃಹ ಇಲಾಖೆ ನಗದು ಬಹುಮಾನ ಘೋಷಿಸಿದೆ. ತನಿಖೆಯಲ್ಲಿ ಭಾಗಿಯಾದ 30 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಟ್ಟು 25 ಲಕ್ಷ ರೂ. ನಗದು ಬಹುಮಾನವಾಗಿ ನೀಡಲಾಗಿದೆ.

ಗೃಹ ಇಲಾಖೆಯ ಆದೇಶದಂತೆ, ಡಿಜೆ ಮತ್ತು ಐಜಿಪಿ ದರ್ಜೆ ಅಧಿಕಾರಿಗಳಿಗೆ ತಲಾ 20 ಸಾವಿರ ರೂ., ಡಿಜಿಪಿ, ಎಡಿಜಿಪಿ ಮತ್ತು ಐಜಿಪಿ ಅಧಿಕಾರಿಗಳಿಗೆ ತಲಾ 8 ಸಾವಿರ ರೂ., ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲಾ 5 ಸಾವಿರ ರೂ., ಜಿಲ್ಲಾಸ್ತರದ ಅಧಿಕಾರಿಗಳಿಗೆ ತಲಾ 5 ಸಾವಿರ ರೂ. ನೀಡಲಾಗಿದೆ. ಒಟ್ಟು ಮೊತ್ತ 35 ಲಕ್ಷ ರೂ. ನಗದು ಬಹುಮಾನವನ್ನು ಪ್ರತ್ಯೇಕ ದರ್ಜೆ ಅಧಿಕಾರಿಗಳಿಗಾಗಿ ಘೋಷಿಸಲಾಗಿದೆ.
ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ. ರೇವಣ್ಣ ವಿರುದ್ಧ ದಾಖಲಾಗಿರುವ 5 ಪ್ರಕರಣಗಳನ್ನು ವಿಶೇಷ ತನಿಖಾ ತಂಡವು ಸಮಗ್ರವಾಗಿ ಪರಿಶೀಲಿಸಿ, ಸಾಕ್ಷಾಧಾರಗಳನ್ನು ಸಂಗ್ರಹಿಸಿ, ದೋಷಾರೋಪಣ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಿ.ಐ.ಡಿ. ಸೈಬರ್ ಕ್ರೈಮ್ ಪ್ರಕರಣ ಸಂಖ್ಯೆ 02/2024ನಲ್ಲಿ ಪ್ರಜ್ವಲ್ ರೇವಣ್ಣ ಕೃತ್ಯ ಸಾಬೀತಾಗಿದ್ದು, ಅಜೀವ ಕಾರವಾಸ ಮತ್ತು 11,60,000 ರೂ. ದಂಡ ವಿಧಿಸಲಾಗಿದೆ. ಇದರಲ್ಲಿ 11,25,000 ರೂ. ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ಗೃಹ ಇಲಾಖೆ ತಿಳಿಸಿದಂತೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಗ್ರ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ನಗದು ಬಹುಮಾನಗಳು ಪೊಲೀಸ್ ಇಲಾಖೆ ವೃತ್ತಿಪರತೆ, ಹೊಣೆಗಾರಿಕೆ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದಿಂದ ನೀಡಲಾಗಿದೆ.