ಬಳ್ಳಾರಿ, ಜ. 24 (DaijiworldNews/TA): ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದ ಚರ್ಚೆ ಇನ್ನೂ ತಣ್ಣಗಾಗುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಗಂಭೀರ ಘಟನೆ ಸಂಭವಿಸಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲುಗೆ ಸೇರಿದ ಜಿ-ಸ್ಟಾರ್ ಲೇಔಟ್ನಲ್ಲಿರುವ ಮಾಡೆಲ್ ಮನೆಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಲಾಗಿದ್ದು, ಪ್ರಕರಣ ರಾಜ್ಯ ರಾಜಕೀಯದಲ್ಲಿ ಹೊಸ ಕೋಲಾಹಲಕ್ಕೆ ಕಾರಣವಾಗಿದೆ.

ಈ ಸಂಬಂಧ ಜನಾರ್ದನ ರೆಡ್ಡಿ ಅವರ ಸೈಟ್ ಇಂಜಿನಿಯರ್ ರಿಜ್ವಾನ್ ನೀಡಿದ ದೂರಿನ ಆಧಾರದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗುಂಪು-ಗುಂಪಾಗಿ ಬಂದು ಬೆಂಕಿ ಹಚ್ಚಿದ ಆರೋಪ : ದೂರು ಪ್ರಕಾರ, ಸುಮಾರು 8ರಿಂದ 10 ಜನ ದುಷ್ಕರ್ಮಿಗಳು ಸ್ಥಳಕ್ಕೆ ಆಗಮಿಸಿ ಮಾದರಿ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ. ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಅವಘಡದಲ್ಲಿ ಮನೆಯೊಳಗಿದ್ದ ಸುಮಾರು ರೂ.1 ಕೋಟಿ 25 ಲಕ್ಷ ಮೌಲ್ಯದ ಪರಿಕರಗಳು ಸಂಪೂರ್ಣವಾಗಿ ಸುಟ್ಟು ನಾಶವಾಗಿವೆ ಎಂದು ತಿಳಿದುಬಂದಿದೆ. 73 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಮಾಡೆಲ್ ಮನೆ : ಕಂಟೋನ್ಮೆಂಟ್ ಪ್ರದೇಶದಲ್ಲಿರುವ ತಮ್ಮ ಮಾಲೀಕತ್ವದ ಜಿ-ಸ್ಟಾರ್ ಲೇಔಟ್ನಲ್ಲಿ ಜನಾರ್ದನ ರೆಡ್ಡಿ ಅವರು ಸುಮಾರು ರೂ. 73 ಕೋಟಿ ವೆಚ್ಚದಲ್ಲಿ ಈ ಮಾದರಿ ಮನೆ ನಿರ್ಮಿಸಿದ್ದರು. ಲೇಔಟ್ನಲ್ಲಿನ ಮನೆಗಳ ವಿನ್ಯಾಸವನ್ನು ಗ್ರಾಹಕರಿಗೆ ಪ್ರದರ್ಶಿಸುವ ಉದ್ದೇಶದಿಂದ ಈ ಮಾಡೆಲ್ ಮನೆ ನಿರ್ಮಿಸಲಾಗಿತ್ತು. ಶುಕ್ರವಾರ ಸಂಜೆ ಈ ದುಷ್ಕರ್ಮಿಗಳ ಕೃತ್ಯದಿಂದಾಗಿ ಆಸ್ತಿ ನಷ್ಟವಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ.