ಉತ್ತರ ಪ್ರದೇಶ, ಜ. 25 (DaijiworldNews/AA): ಪ್ರತಿ ವರ್ಷವೂ ಸಾವಿರಾರು ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಕೆಲವರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಹಾಗೂ ಐಎಎಸ್ ಗೆ ಆಯ್ಕೆಯಾದ ಅಂಕರ್ ತ್ರಿಪಾಠಿ ಅವರ ಯಶೋಗಾಥೆ ಇದು.

ಅಮೇಠಿ ಜಿಲ್ಲೆಯ ಕಾಚನಾವ್ ಎಂಬ ಪುಟ್ಟ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದ ಅಂಕರ್ ತ್ರಿಪಾಠಿ, ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸು ಕಂಡವರು. ಅಂಕರ್ ಅವರು, ರೈತ ಸುರೇಂದ್ರ ನಾರಾಯಣ್ ತ್ರಿಪಾಠಿ ಮತ್ತು ಗೃಹಿಣಿ ಸರೋಜಾ ತ್ರಿಪಾಠಿ ದಂಪತಿಯ ಪುತ್ರ.
ಅಂಕರ್ ತಮ್ಮ ಆರಂಭಿಕ ಶಿಕ್ಷಣವನ್ನು ಅಯೋಧ್ಯೆಯ ಕುಮಾರ್ಗಂಜ್ನ ಡಿಎವಿ ಕಾಲೇಜಿನಲ್ಲಿ ಪೂರೈಸಿದರು. ವಿದ್ಯಾ ಮಂದಿರದಲ್ಲಿ 12ನೇ ತರಗತಿಯನ್ನು ಮುಗಿಸಿದರು. ನಂತರ ಗೋರಖ್ಪುರದ ಮಹಾಮನಾ ಮದನ್ ಮೋಹನ್ ಮಾಳವೀಯ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಟೆಕ್ ಪದವಿ ಪಡೆದರು. ಅವರಿಗೆ ಬಾಲ್ಯದಿಂದಲೂ ಅವರ ಒಲವು ನಾಗರಿಕ ಸೇವೆಯ ಮೇಲಿತ್ತು.
2022ರಲ್ಲಿ ಅಂಕರ್ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ಆರಂಭಿಸಿದರು. ಅವರ ಕಠಿಣ ಪರಿಶ್ರಮದ ಫಲವಾಗಿ, ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 513ನೇ ರ್ಯಾಂಕ್ ಪಡೆದು ತೇರ್ಗಡೆಯಾದರು ಮತ್ತು ಈಶಾನ್ಯ ಕೆಡರ್ನಲ್ಲಿ ಐಪಿಎಸ್ ಗೆ ಸೇರ್ಪಡೆಯಾದರು. ಆದರೆ, ಅವರ ಗುರಿ ಐಎಎಸ್ ಅಧಿಕಾರಿಯಾಗುವುದಾಗಿದ್ದರಿಂದ ಅವರಿಗೆ ಅಷ್ಟಕ್ಕೇ ತೃಪ್ತಿ ಇರಲಿಲ್ಲ.
ಹೈದರಾಬಾದ್ನಲ್ಲಿ ಐಪಿಎಸ್ ತರಬೇತಿ ಪಡೆಯುತ್ತಿರುವಾಗಲೂ ಅಂಕರ್, ದಿನಕ್ಕೆ ಸುಮಾರು 12 ರಿಂದ 16 ಗಂಟೆಗಳ ಕಾಲ ಯುಪಿಎಸ್ ಸಿ ಪರೀಕ್ಷೆಗಾಗಿ ಓದುತ್ತಿದ್ದರು. ಸಾಮಾಜಿಕ ಜಾಲತಾಣ ದೂರವಿದ್ದು ಪರೀಕ್ಷೆಗಾಗಿ ಸಿದ್ಧತೆ ನಡೆಸಿದರು. ಅವರ ಈ ನಿರಂತರ ಪರಿಶ್ರಮದ ಫಲವಾಗಿ, 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು ಅಖಿಲ ಭಾರತ ಮಟ್ಟದಲ್ಲಿ 50ನೇ ರ್ಯಾಂಕ್ ಪಡೆದರು. ಈ ಮೂಲಕ ತಮ್ಮ ಬಹುಕಾಲದ ಕನಸಾದ ಐಎಎಸ್ ಗೆ ಆಯ್ಕೆಯಾದರು.