ಧರ್ಮಶಾಲಾ, ಜ. 25 (DaijiworldNews/AA): ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮನಾಲಿ, ಶಿಮ್ಲಾ, ಕಾಲ್ಕಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರಂತರ ಹಿಮಪಾತವಾಗುತ್ತಿದೆ. ಈ ಹಿನ್ನೆಲೆ ಕೆಲ ಪ್ರವಾಸಿಗರು ಸಂಭ್ರಮಿಸುತ್ತಿದ್ದರೆ, ಇನ್ನೂ ಕೆಲವರು ವಾಪಸ್ ಊರುಗಳಿಗೆ ತೆರಳಲು ರಸ್ತೆಗಳಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ.

ಕುಲು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಕೋಥಿ ಮತ್ತು ಮನಾಲಿ ರಸ್ತೆಗಳ ಉದ್ದಕ್ಕೂ ವಾಹನಗಳು ನಿಂತಿವೆ. ಹಿಮಪಾತದಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, 8 ಕಿಮೀಗೂ ಅಧಿಕ ಉದ್ದಕ್ಕೂ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿವೆ.
ಮನಾಲಿಯಲ್ಲಿ ಒಂದು ಕಡೆ ಹಿಮ ಆವರಿಸಿದ್ರೆ, ಮತ್ತೊಂದು ಕಡೆ ಜನದಟ್ಟಣೆ ಹೆಚ್ಚಾಗಿದೆ. ಹೀಗಾಗಿ ರಾಜ್ಯಾದ್ಯಂತ ಸುಮಾರು 685 ರಸ್ತೆಗಳಲ್ಲಿ ಸಂಚಾರವೇ ಬಂದ್ ಆಗಿದೆ. ಈ ಪೈಕಿ 292 ರಸ್ತೆಗಳು ಲಹೌಲ್ ಮತ್ತು ಸ್ಪತಿ ಜಿಲ್ಲೆಗಳದ್ದಾಗಿವೆ. ಇದಲ್ಲದೇ ಚಂಬಾದಲ್ಲಿ 132, ಮಂಡಿಯಲ್ಲಿ 126, ಕುಲುವಿನಲ್ಲಿ 79, ಸಿರ್ಮೌರ್ನಲ್ಲಿ 29, ಕಿನ್ನೌರ್ನಲ್ಲಿ 20, ಕಾಂಗ್ರಾದಲ್ಲಿ 4, ಉನಾದಲ್ಲಿ 2 ಮತ್ತು ಸೋಲನ್ನಲ್ಲಿ 1 ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದುಬಂದಿದೆ.
ಭಾರೀ ಹಿಮಪಾತದಿಂದಾಗಿ ಶಿಮ್ಲಾದಲ್ಲಿ ನರಕಂದ, ಜುಬ್ಬಲ್, ಕೊಟ್ಖೈ, ಕುಮಾರ್ಸೈನ್, ಖರಪಥರ್, ರೋಹ್ರು ಮತ್ತು ಚೋಪಾಲ್ನಂತಹ ಪಟ್ಟಣಗಳ ಸಂಪರ್ಕ ಕಡಿತಗೊಂಡಿವೆ.
ಮನಾಲಿಯಲ್ಲಿ ಜ.23 ರ ಸಂಜೆಯಿಂದಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದೀಗ 2 ದಿನ ಕಳೆದರೂ ಸಾವಿರಾರು ಪ್ರವಾಸಿಗರು ರಸ್ತೆಗಳಲ್ಲೇ ಪರದಾಡುವಂತಾಗಿದೆ. ಈ ಮಧ್ಯೆ ಇಂದು ಚಂಡಮಾರುತ ಅಪ್ಪಳಿಸಲಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.