ಪಟ್ನಾ, ಜ. 25 (DaijiworldNews/TA): ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಮಾಜಿ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಪಟ್ನಾದಲ್ಲಿ ನಡೆದ ಆರ್ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಸಂಸ್ಥಾಪಕ ಲಾಲೂ ಪ್ರಸಾದ್ ಯಾದವ್ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಉಪಸ್ಥಿತಿಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಪಕ್ಷದ ಪರಮೋಚ್ಚ ಕಾರ್ಯಕಾರಿ ಅಧಿಕಾರವನ್ನು ತೇಜಸ್ವಿ ಯಾದವ್ ಅವರಿಗೆ ಅಧಿಕೃತವಾಗಿ ಒಪ್ಪಿಸಲಾಗಿದೆ. ತೇಜಸ್ವಿ ಯಾದವ್ ಅವರ ನೇಮಕದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಣೆ ಹೊರಡಿಸಿರುವ ಆರ್ಜೆಡಿ, ಇದನ್ನು ‘ಹೊಸ ಯುಗದ ಉದಯ’ ಎಂದು ಬಣ್ಣಿಸಿದೆ. ಪಕ್ಷದ ಭವಿಷ್ಯವನ್ನು ಯುವ ನಾಯಕತ್ವದ ಕೈಗೆ ಒಪ್ಪಿಸುವ ಮೂಲಕ ಸಂಘಟನೆಗೆ ಹೊಸ ಚೈತನ್ಯ ತುಂಬುವ ಉದ್ದೇಶ ಪಕ್ಷದ ನಾಯಕತ್ವಕ್ಕಿದೆ ಎಂಬ ಸಂದೇಶವನ್ನು ಈ ನೇಮಕ ನೀಡಿದೆ.
ಆರ್ಜೆಡಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕವಾಗುವ ಮುನ್ನವೇ ತೇಜಸ್ವಿ ಯಾದವ್ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಗಳ ಬಗ್ಗೆ ಮಾತನಾಡುತ್ತಿದ್ದರು. ಬೂತ್ ಮಟ್ಟದಿಂದಲೇ ಪಕ್ಷವನ್ನು ಪುನರ್ಸಂಘಟಿಸುವ ಯೋಜನೆ ಹೊಂದಿರುವುದಾಗಿ ಅವರು ಆರ್ಜೆಡಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದರು. ಸಂಘಟನೆಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಕೈಗೊಳ್ಳಲಿರುವ ಕ್ರಮಗಳು, ಅವರಿಗೆ ಪಕ್ಷಾಧ್ಯಕ್ಷ ಸ್ಥಾನ ಖಚಿತವಾಗಿರುವುದನ್ನು ಸೂಚಿಸುತ್ತಿದ್ದವು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಪಕ್ಷ ಹೀನಾಯ ಸೋಲು ಅನುಭವಿಸಿದ್ದು, ಜೆಡಿಯು ನಾಯಕ ನಿತೀಶ್ ಕುಮಾರ್ ಹಲವು ವರ್ಷಗಳಿಂದ ನಿರಂತರವಾಗಿ ಬಿಹಾರ ಆಡಳಿತದ ಚುಕ್ಕಾಣಿ ಹಿಡಿದುಕೊಂಡಿದ್ದಾರೆ. ಲಾಲೂ ಪ್ರಸಾದ್ ಯಾದವ್ ಸ್ಥಾಪಿಸಿದ ಆರ್ಜೆಡಿ ಪಕ್ಷದ ರಾಜಕೀಯ ಶಕ್ತಿ ವರ್ಷದಿಂದ ವರ್ಷಕ್ಕೆ ಕುಂದುತ್ತಿರುವ ಹಿನ್ನೆಲೆಯಲ್ಲಿ, ಈ ಸಂಕಷ್ಟಕರ ಸಮಯದಲ್ಲಿ ತೇಜಸ್ವಿ ಯಾದವ್ ಅವರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಪಕ್ಷವನ್ನು ಮತ್ತೆ ಬಲಪಡಿಸಿ, ಹೊಸ ಜೀವ ತುಂಬುವಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ, ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತೇಜಸ್ವಿ ಯಾದವ್ ವಿರುದ್ಧ ತೀವ್ರ ಟೀಕೆ ಮುಂದುವರಿಸಿದ್ದಾರೆ. ಆರ್ಜೆಡಿ ಪಕ್ಷದ ನಿಯಂತ್ರಣ ನುಸುಳುಕೋರರ ಕೈಗೆ ಸಿಕ್ಕಿದ್ದು, ಲಾಲೂವಾದವನ್ನು ನಾಶ ಮಾಡುವುದೇ ಅವರ ಏಕೈಕ ಗುರಿಯಾಗಿದೆ ಎಂದು ರೋಹಿಣಿ ಆಚಾರ್ಯ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ರೋಹಿಣಿ ಆಚಾರ್ಯ ಅವರನ್ನು ಲಾಲೂ ಪ್ರಸಾದ್ ಯಾದವ್ ಅವರ ನಿವಾಸ ಹಾಗೂ ಕುಟುಂಬದಿಂದ ಹೊರಗಿಡಲಾಗಿತ್ತು. ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಅವರ ಅನಾರೋಗ್ಯವನ್ನು ತೇಜಸ್ವಿ ಯಾದವ್ ದುರುಪಯೋಗಪಡಿಸಿಕೊಂಡು ಪಕ್ಷ ಹಾಗೂ ಕುಟುಂಬವನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಹಲವು ಬಾರಿ ಆರೋಪ ಮಾಡಿರುವುದು ಆರ್ಜೆಡಿ ಒಳಗಿನ ಕುಟುಂಬ ರಾಜಕಾರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ. ತೇಜಸ್ವಿ ಯಾದವ್ ಅವರ ನೇಮಕವು ಆರ್ಜೆಡಿ ಪಕ್ಷದ ಭವಿಷ್ಯ ದಿಕ್ಕು ನಿರ್ಧರಿಸುವ ಮಹತ್ವದ ಘಟ್ಟವಾಗಿದ್ದು, ಮುಂದಿನ ದಿನಗಳಲ್ಲಿ ಬಿಹಾರ ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗಳಿಗೆ ಇದು ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.