ಬೆಂಗಳೂರು, ಜು21(Daijiworld News/SS): ಸದನದಲ್ಲಿ ಸೋಮವಾರ ವಿಶ್ವಾಸಮತವನ್ನು ಸಾಬೀತು ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಅವರ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ರಾಜಕಾರಣ ಅವರಿಗೆ, ನಮ್ಮ ರಾಜಕಾರಣ ನಮಗೆ. ಅತೃಪ್ತ ಶಾಸಕರು ವಾಪಸ್ ಬರಲು ಸಿದ್ಧರಿದ್ದಾರೆ. ಆದರೆ ಮುಂಬೈನಲ್ಲಿರುವ ಶಾಸಕರು ಇಂದಿಗೂ ಗನ್ ಪಾಯಿಂಟ್'ನಲ್ಲಿದ್ದಾರೆ. ಯಾರಿಗೂ ಮುಕ್ತವಾಗಿ ದೂರವಾಣಿಯಲ್ಲಿ ಮಾತನಾಡುವುದಕ್ಕೆ ಬಿಡುತ್ತಿಲ್ಲ. ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿದ್ದಾರೆ ಎಂದು ಹೇಳಿದರು.
ಆರು ಜನ ಶಾಸಕರನ್ನು ಲೋನಾವಾಲಾದಲ್ಲಿ, ಇನ್ನು ಉಳಿದ ಶಾಸಕರನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಎಲ್ಲಾ ಕಡೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಿದ್ದಾರೆ ಎನ್ನುವ ಮೂಲಕ ಶಾಸಕರನ್ನು ಬಂಧನದಲ್ಲಿಟ್ಟಿದ್ದಾರೆಂದು ಹೇಳಿದರು.
ಸದನದಲ್ಲಿ ಸೋಮವಾರ ವಿಶ್ವಾಸಮತವನ್ನು ಸಾಬೀತು ಮಾಡುತ್ತೇವೆ. ಎಲ್ಲಿ, ಏನು ತಪ್ಪಾಗಿದೆ ಎಂದು ಚರ್ಚೆ ಮಾಡುತ್ತೇವೆ. ಜನಕ್ಕೆ ತಿಳಿಸುತ್ತೇವೆ. ನಮಗೆ ವಿಶ್ವಾಸ ಇದೆ. ಪ್ರತಿಪಕ್ಷದಲ್ಲಿರುವ ಶಾಸಕರೂ ನಮಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.
ಲೋಕಸಭೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರು ವಿಶ್ವಾಸಮತ ಮಂಡಿಸಿದಾಗ, ನಿರ್ಣಯದ ಮೇಲೆ ಚರ್ಚೆ ನಡೆಸಿ ಮತಕ್ಕೆ ಹಾಕಲು ಹತ್ತು ದಿನ ತೆಗೆದುಕೊ೦ಡಿದ್ದರು. ಅಲ್ಲದೆ ಇನ್ನಷ್ಟು ವಿಳಂಬವಾಗುವ ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದರು. ಏನು ಮಾಡುವುದು ನಮ್ಮ ಸಂಸ್ಕೃತಿ ಈ ಮಟ್ಟಕ್ಕೆ ಬಂದಿದೆ. ಶಾಸಕರೆಲ್ಲಾ ವಾಪಸ್ ರಾಜ್ಯಕ್ಕೆ ಬಂದ ಮೇಲೆ ಒಂದು ಸಿನಿಮಾ ತೆಗೆಯಬಹುದು ಅಷ್ಟು ರೋಚಕವಾಗಿರಲಿದೆ ಎಂದು ಹೇಳಿದರು.