ಬೆಂಗಳೂರು, ಜು21(Daijiworld News/SS): ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕಂಪನಿ ಮಾಲೀಕ ಮನ್ಸೂರ್ ಖಾನ್'ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ಇದೀಗ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್'ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
ದುಬೈನಲ್ಲಿ ಸೆರೆಸಿಕ್ಕಿದ್ದ ಮನ್ಸೂರ್ ಖಾನ್ ಅನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜು.2ಒರ ಮಧ್ಯಾಹ್ನ 12.15ರ ವೇಳೆಗೆ ಒಂದನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ (ಪಿಎಂಎಲ್ ಎ ನ್ಯಾಯಾಲಯ) ಹಾಜರುಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಮನ್ಸೂರ್ ಅನ್ನು ಜುಲೈ 23ರವರೆಗೆ ಇಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಮನ್ಸೂರ್ ಅಲಿ ಖಾನ್ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ವಿಚಾರಣೆ ನಡೆಸಬೇಕಿದೆ. ಆದ್ದರಿಂದ ಅವರನ್ನು 15 ದಿನಗಳ ಕಾಲ ತಮ್ಮ ತಮ್ಮ ವಶಕ್ಕೆ ನೀಡಬೇಕೆಂದು ಇಡಿ ಪರ ವಕೀಲರು ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಕೇವಲ ಮೂರು ದಿನಗಳ ಕಾಲ ವಶಕ್ಕೆ ನೀಡುವುದಾಗಿ ಆದೇಶಿಸಿತು.
ವಿಚಾರಣೆಯ ನಂತರ ಮನ್ಸೂರ್ ಅಲಿ ಖಾನ್ ಅನ್ನು ದಾಖಲೀಕರಣಕ್ಕಾಗಿ ಇಡಿ ಕಚೇರಿಗೆ ಕರೆದೊಯ್ಯಲಾಗಿದೆ. ಇಡಿ ಅಧಿಕಾರಿಗಳು, ವಂಚನೆ ದೂರು ದಾಖಲಾದ ನಂತರ ನಡೆಸಿದ ದಾಳಿ ವೇಳೆ ಲಭ್ಯವಾದ ಆಸ್ತಿಪಾಸ್ತಿ, ಚಿನ್ನಾಭರಣಗಳು, ದಾಖಲೆಗಳ ಕುರಿತು ವಿಚಾರಣೆ ನಡೆಸಲಿದೆ.