ಬೆಂಗಳೂರು,ಜ. 27 (DaijiworldNews/AK): ಸಮಾಜದಲ್ಲಿ ಮಹಿಳೆ ಒಬ್ಬಂಟಿಯಾಗಿದ್ದರೆ ಬೇರೆ ಸಂಬಂಧ ಕಟ್ಟಿಕೊಡುತ್ತಾರೆ. ಅದರಲ್ಲೂ ಮಹಿಳೆ ಮದುವೆಯಾಗಿ ಗಂಡನನ್ನು ಕಳೆದುಕೊಂಡರೆ, ಅದಕ್ಕೆ ಬೇರೆಯೇ ಕಲ್ಪನೆಗಳನ್ನು ಸೃಷ್ಟಿಸುತ್ತಾರೆ. ಅದಕ್ಕಾಗಿ ಅಂತಹ ಮಹಿಳೆಯ ಅಭಿವೃದ್ಧಿಗಾಗಿ ಹಾಗೂ ಅವರನ್ನು ಮದುವೆಯಾಗಲು ಪ್ರೋತ್ಸಾಹಧನವನ್ನು ನೀಡಲು ರಾಜ್ಯ ಸರ್ಕಾರಗಳು ಹೊಸ ಯೋಜನೆಯನ್ನು ತಂದಿದೆ.

ಕರ್ನಾಟಕ ಸರ್ಕಾರವು ವಿಧವಾ ಮರು ವಿವಾಹವನ್ನು ಉತ್ತೇಜಿಸಲು ನೀಡುವ ಪ್ರೋತ್ಸಾಹಧನವನ್ನು ಇತ್ತೀಚೆಗೆ ಪರಿಷ್ಕರಿಸಲಾಗಿದೆ. ಪ್ರಸ್ತುತ ಈ ಯೋಜನೆಯ ಅಡಿಯಲ್ಲಿ ಮೊತ್ತವನ್ನು 3 ಲಕ್ಷ ರೂ.ವರೆಗೂ ಹೆಚ್ಚಿಸಲಾಗಿದೆ. ಈ ಹಿಂದೆ ಯೋಜನೆಯಡಿ ವಿಧವೆಯನ್ನು ವಿವಾಹವಾಗುವ ವ್ಯಕ್ತಿಗೆ ಸರ್ಕಾರವು 2,00,000 (ಎರಡು ಲಕ್ಷ ರೂಪಾಯಿ) ಪ್ರೋತ್ಸಾಹಧನವನ್ನು ನೀಡಲಾಗುತ್ತಿತ್ತು. ಇದೀಗ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ.
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ (SC) ವಿಧವೆಯರ ಮರು ವಿವಾಹವನ್ನು ಪ್ರೋತ್ಸಾಹಿಸಲು ಈ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಪರಿಶಿಷ್ಟ ಜಾತಿಯ ವಿಧವೆಯನ್ನು ವಿವಾಹವಾಗುವ ದಂಪತಿಗೆ ಸರ್ಕಾರವು 3,00,000 (ಮೂರು ಲಕ್ಷ ರೂಪಾಯಿ) ಪ್ರೋತ್ಸಾಹಧನವನ್ನು ನೀಡುತ್ತದೆ ಎಂದು ಹೇಳಿದೆ.
ಪರಿಶಿಷ್ಟ ಜಾತಿಯ ವಿಧವೆಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ನೀಡುವುದು, ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಮತ್ತು ಮರು ವಿವಾಹದ ಮೂಲಕ ಅವರ ಜೀವನವನ್ನು ಮರುರೂಪಿಸಲು ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಜಾತಿ: ಮಹಿಳೆಯು ಕಡ್ಡಾಯವಾಗಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು.
ವಿವಾಹದ ಸ್ಥಿತಿ: ಇದು ಮಹಿಳೆಯ ಪಾಲಿಗೆ ಮರು ವಿವಾಹವಾಗಿರಬೇಕು (ಮೊದಲ ಪತಿ ಮರಣ ಹೊಂದಿರಬೇಕು).
ಪುರುಷನ ಅರ್ಹತೆ: ಮಹಿಳೆಯನ್ನು ಮದುವೆಯಾಗುವ ಪುರುಷನಿಗೆ ಇದು ಮೊದಲ ವಿವಾಹವಾಗಿರಬೇಕು.
ವಯೋಮಿತಿ: ಸರ್ಕಾರಿ ನಿಯಮದಂತೆ ಮಹಿಳೆಗೆ 18 ವರ್ಷ ಮತ್ತು ಪುರುಷನಿಗೆ 21 ವರ್ಷ ತುಂಬಿರಬೇಕು.
ಸಮಯದ ಮಿತಿ: ವಿವಾಹವಾದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಅವಧಿ: ಮದುವೆಯಾದ 1 ವರ್ಷದೊಳಗೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯ.
ಅಗತ್ಯ ದಾಖಲೆಗಳು :
ಜಾತಿ ಪ್ರಮಾಣಪತ್ರ: ದಂಪತಿಗಳಿಬ್ಬರ ಜಾತಿ ಪ್ರಮಾಣಪತ್ರ (ಮಹಿಳೆಯು SC ಎಂದು ದೃಢೀಕರಿಸಲು).
ಮರಣ ಪ್ರಮಾಣಪತ್ರ: ಮಹಿಳೆಯ ಮೊದಲ ಪತಿಯ ಮರಣ ಪ್ರಮಾಣಪತ್ರ.
ವಿವಾಹ ನೋಂದಣಿ ಪತ್ರ: ಮ್ಯಾರೇಜ್ ರಿಜಿಸ್ಟ್ರಾರ್ ಅವರಿಂದ ಪಡೆದ ಅಧಿಕೃತ ಪ್ರಮಾಣಪತ್ರ.
ಆಧಾರ್ ಕಾರ್ಡ್: ದಂಪತಿಗಳಿಬ್ಬರ ಆಧಾರ್ ಪ್ರತಿ.
ಬ್ಯಾಂಕ್ ವಿವರ: ದಂಪತಿಗಳ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆ (Joint Account) ವಿವರ.
ಭಾವಚಿತ್ರ: ವಿವಾಹದ ಸಂಭ್ರಮದ ಫೋಟೋಗಳು.
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಯು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವುದರಿಂದ, ನೀವು ಈ ಕೆಳಗಿನ ಮೂಲಕ ಅರ್ಜಿ ಸಲ್ಲಿಸಬಹುದು: ಆನ್ಲೈನ್: ಸೇವಾ ಸಿಂಧು ಪೋರ್ಟಲ್ನಲ್ಲಿ ‘ಸಮಾಜ ಕಲ್ಯಾಣ ಇಲಾಖೆ’ಯ ಅಡಿಯಲ್ಲಿರುವ ಈ ಯೋಜನೆಯನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.
ಕಚೇರಿ: ನಿಮ್ಮ ಜಿಲ್ಲೆಯ ಅಥವಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.