ಬೆಂಗಳೂರು, ಜು 21(Daijiworld News/RD): ವಿಶ್ವಾಸ ಮತ ಸಾಬೀತು ಪಡಿಸಲು ಹರಸಾಹಸ ಪಡುತ್ತಿರುವ ರಾಜ್ಯದ ಮೈತ್ರಿ ಸರ್ಕಾರ ಶಾಸಕರ ಮನವೊಲಿಸಲು ವಿಫಲವಾಗುತ್ತಿದೆ. ಪಕ್ಷದ ಶಾಸಕರ ರಾಜೀನಾಮೆ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಅತೃಪ್ತ ಶಾಸಕರ ಎಷ್ಟೇ ಮನವೊಲಿಕೆ ಪ್ರಯತ್ನಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲೇ ಬೇಕು ಎಂದು ಪಟ್ಟು ಹಿಡಿದ ಸಿಎಂ ಕುಮಾರಸ್ವಾಮಿ ಕೊನೆಯ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಈವರೆಗೆ ಸರ್ಕಾರದ 17 ಶಾಸಕರು ಗೈರಾಗಿದ್ದು, ಬಹುಮತ ಸಾಬೀತು ಪಡಿಸುವುದು ಕಷ್ಟ ಎನ್ನುವುದು ಸಿಎಂ ಗೆ ಮನದಟ್ಟಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಸಿಎಂ ಪಟ್ಟ ನೀಡುವುದಾಗಿ ಹೇಳಿಕೆ ನೀಡಿರುವ ವಿಚಾರ, ಮೂಲಗಳಿಂದ ಬಹಿರಂಗಗೊಂಡಿದೆ. ಈ ಮೂಲಕ ಸಿ.ಎಂ. ಕೊನೆಯ ಅಸ್ತ್ರವೊಂದನ್ನು ಪ್ರಯೋಗಿಸಿದ್ದಾರೆ.
2018 ರ ಚುನಾವಣೆಯ ಫಲಿತಾಂಶ ಬಂದ ಬಳಿಕ ನಮ್ಮದು 20:20 ಸರ್ಕಾರ ಅಲ್ಲ. ಪೂರ್ಣಾವಧಿಯವರೆಗೆ ಒಬ್ಬರೇ ಸಿಎಂ ಇರುತ್ತಾರೆ ಎಂದು ಕಾಂಗ್ರೇಸ್ ನಾಯಕರು ಹೇಳಿದ್ದರು. ಆದರೆ ಈಗ ಕಾಂಗ್ರೆಸ್ಸಿನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾದ ಕಾರಣ ಕಾಂಗ್ರೇಸ್ ನಾಯಕರಿಗೆ ಸಿಎಂ ಪಟ್ಟ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಎಂ. ಹೆಚ್.ಡಿ.ಕೆ. ನಮ್ಮ ಪ್ರಯತ್ನಗಳು ಮುಗಿದಿವೆ. ಇನ್ನು ನಮ್ಮಿಂದ ಆಗುವುದಿಲ್ಲ. ನಿಮ್ಮ ಶಾಸಕರನ್ನ ಕರೆತಂದು ನೀವೇ ಸಿಎಂ ಆಗಿ ಸರ್ಕಾರವನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಸಿಎಂ ಪಟ್ಟ ತ್ಯಾಗ ಮಾಡಿಯಾದರೂ ಸಹ ಮೈತ್ರಿ ಸರ್ಕಾರ ಉಳಿಯಬೇಕು. ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ, ಡಿಕೆ ಶಿವಕುಮಾರ್ ಯಾರಾದರೂ ಸಿಎಂ ಆಗಲಿ. ಅವರಿಗೆ ನಮ್ಮ ಬಾಹ್ಯ ಬೆಂಬಲವಿರುತ್ತದೆ. ಈ ನಿರ್ಧಾರಕ್ಕೆ ದೇವೇಗೌಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೆಚ್.ಡಿ.ಕೆ. ಹೇಳಿದರು.