ಕೋಲ್ಕತ್ತ, ಜು21(Daijiworld News/SS): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಐತಿಹಾಸಿಕವಲ್ಲ, ದೊಡ್ಡ ರಹಸ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಣ, ಪೊಲೀಸ್, ವಿದ್ಯುನ್ಮಾನ ಮತಯಂತ್ರಗಳ ಮೂಲಕ ರಾಜ್ಯವನ್ನು ಅತಿಕ್ರಮಣ ಮಾಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರವನ್ನೂ ಕಳೆದುಕೊಳ್ಳಲಿದೆ. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ನ್ನೇ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಯಾವ ಹೋರಾಟ ನಡೆಸುತ್ತಿದೆ ಬಿಜೆಪಿ..? ಯಾರು ಅವರು...? ಬಿಜೆಪಿ ಬಗ್ಗೆ ಬಂಗಾಳದಲ್ಲಿ ಯಾರಿಗೂ ಗೊತ್ತಿಲ್ಲ. ಆರ್ಎಸ್ಎಸ್ನವರು ಶಾಲಾ ದಿನಗಳಿಂದಲೂ ಕೆಟ್ಟ ಕೆಲಸಗಳನ್ನೇ ಮಾಡುತ್ತ ಬಂದಿದ್ದಾರೆ. ಬಿಹಾರದಲ್ಲಿ ಸರ್ಕಾರ ಆರ್ಎಸ್ಎಸ್ ಕಾರ್ಯ ಚಟುವಟಿಕೆ ಮೇಲೆ ನಿಗಾ ಇಡುವಂತೆ ಪೊಲೀಸರಿಗೆ ತಿಳಿಸಿದೆ. ಆ ಕೆಲಸವನ್ನು ನಾವಿನ್ನೂ ಮಾಡಿಲ್ಲ. ಈ ಬಗ್ಗೆ ಅವರು ತಿಳಿದುಕೊಳ್ಳಲಿ ಎಂದು ಹೇಳಿದರು.
ಟಿಎಂಸಿ ಮುಖಂಡರು ಸೇರಿ ತಮ್ಮ ಬಳಿಯೂ ಬಿಜೆಪಿ ಕಟ್ ಮನಿ ವಾಪಸ್ ಮಾಡಲು ಕೇಳುತ್ತಿದೆ. ಅದಕ್ಕೂ ಮೊದಲು ಪ್ರಧಾನಿ ಕಳೆದ ಲೋಕಸಭಾ ಚುನಾವಣೆ ಪೂರ್ವ ನೀಡಿದ್ದ ಭರವಸೆಯಂತೆ 15 ಲಕ್ಷ ರೂಪಾಯಿಯನ್ನು ಅಕೌಂಟ್ಗೆ ಹಾಕಿ ಎಂದು ಹೇಳಿದರು.