ಬೆಂಗಳೂರು, ಜು21(Daijiworld News/SS): ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ನಮ್ಮೆಲ್ಲ ಶಾಸಕರನ್ನು ಮನವೊಲಿಸುವ ವಿಶ್ವಾಸ ನಮಗಿದೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಂಬಿಕೆಯಲ್ಲಿ ಬದುಕಿದವನು. ನಮಗೆ ವಿಶ್ವಾಸವಿದೆ. ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ನಮ್ಮೆಲ್ಲ ಶಾಸಕರನ್ನು ಮನವೊಲಿಸುವ ವಿಶ್ವಾಸ ನಮಗಿದೆ. ಬಿಜೆಪಿಯವರ ಟ್ರಿಕ್ಸ್ನ್ನು ನಾವು ಬೇಡ ಎನ್ನಲಾಗುವುದಿಲ್ಲ. ಅವರದ್ದು ಅವರು ಮಾಡಿಕೊಳ್ಳಲಿ ಎಂದು ಹೇಳಿದರು.
ಜೆಡಿಎಸ್ನವರು ನಾವು ಎಲ್ಲಾ ತ್ಯಾಗಕ್ಕೂ ಸಿದ್ಧ ಎಂದು ಮುಖ್ಯಮಂತ್ರಿ, ಅವರ ಪಕ್ಷದವರು ಮುಕ್ತ ಕಂಠದಿಂದ ಹೇಳಿದ್ದಾರೆ. ಸರ್ಕಾರ ಉಳಿಯಲಿ. ನಾವು ಎಲ್ಲ ತ್ಯಾಗಕ್ಕೂ ಸಿದ್ಧವಿದ್ದೇವೆ ನಿಮ್ಮಲ್ಲಿ ಯಾರು ಬೇಕಾದರೂ ಕುಳಿತುಕೊಳ್ಳಲಿ ಎಂದು ಹೇಳಿದ್ದಾರೆ. ಅವರೇ ಕುಳಿತುಕೊಳ್ಳಬೇಕು ಎಂದೇನಿಲ್ಲ. ನನಗೂ, ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ಖರ್ಗೆ ಅವರಿಗೂ ಹೇಳಿದ್ದಾರೆ. ಹೈಕಮಾಂಡ್ಗೂ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಹೇಳಿದರು.
ರಾಜೀನಾಮೆ ಕೊಡುವವರನ್ನು ಬೇಡ ಬನ್ನಿ ಎಂದು ಕಾಲಿಗೆ ಬಂದು ಕರೆದುಕೊಂಡು ಬರುವುದು ಸ್ಟಂಟ್ ಅಲ್ಲ. ಓರ್ವ ಸಚಿವನಾಗಿ ಅವರನ್ನು ತಡೆಯುವುದು ನನ್ನ ಕರ್ತವ್ಯ. ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ಈಗ ಏನು ಹೇಳಲಾಗುವುದಿಲ್ಲ. ಈಗ ಅತೃಪ್ತ ಶಾಸಕರು ಮೂರು ಭಾಗವಾಗಿ ಮೂರು ಕಡೆಗೆ ಶಿಫ್ಟ್ ಆಗಿದ್ದಾರೆ. ಅವರು ಚಿಕ್ಕ ಮಕ್ಕಳಲ್ಲ ಎಂದು ಹೇಳಿದರು.