ಬೆಂಗಳೂರು, ಜು21(Daijiworld News/SS): ಸದನದಲ್ಲಿ ನಮ್ಮ ಪಕ್ಷ ನ್ಯಾಯಬದ್ಧವಾಗಿ ನಡೆದುಕೊಳ್ಳುತ್ತಿದೆ. ಆದರೆ ಮೈತ್ರಿ ಸರ್ಕಾರದ ಪಕ್ಷಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸುಪ್ರೀಂಕೋರ್ಟ್ ನ್ಯಾಯದ ಪರ ತೀರ್ಪು ನೀಡಲಿದೆ ಎಂಬ ನಂಬಿಕೆಯಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ. ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆಗ ಮಾತ್ರ ರಾಜ್ಯದ ಬರ ಹಾಗೂ ರೈತರ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಪಕ್ಷಗಳಿಗೆ ಸೂಕ್ತ ಬಹುಮತವಿಲ್ಲ. ಎರಡು ಪಕ್ಷಗಳಲ್ಲಿ ಶಾಸಕರ ಸಂಖ್ಯೆ ಕಡಿಮೆಯಿದೆ ಹಾಗೂ ಬಿಜೆಪಿಗೆ ಬಹುಮತವಿದೆ ಎಂದು ಇಡೀ ಜಗತ್ತಿಗೆ ಗೊತ್ತು. ಸದನದಲ್ಲಿ ನಮ್ಮ ಪಕ್ಷ ನ್ಯಾಯಬದ್ಧವಾಗಿ ನಡೆದುಕೊಳ್ಳುತ್ತಿದೆ. ಆದರೆ ಮೈತ್ರಿ ಸರ್ಕಾರದ ಪಕ್ಷಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿವೆ ಎಂದು ತಿಳಿದು ಬರುತ್ತಿದೆ ಎಂದು ಹೇಳಿದರು.
ಸದನದಲ್ಲಿ ನಾಳೆ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆ ಮಾಡದಿದ್ದರೆ ಬಿಜೆಪಿಗೆ ಹಲವು ಮಾರ್ಗಗಳಿವೆ. ನಾವು ಆಗ ಸಂವಿಧಾನಾತ್ಮಕವಾಗಿ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ರಾಷ್ಟ್ರಪತಿ ಅಳ್ವಿಕೆ ಬಂದರೂ, ರಾಜಕಾರಣದ ಕುದುರೆ ವ್ಯಾಪಾರ ನಿಲ್ಲಲ್ಲ. ಇನ್ನು ಮಧ್ಯಂತರ ಚುನಾವಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.