ಬೆಂಗಳೂರು, ಜು 22 (Daijiworld News/RD): ಪಕ್ಷೇತರ ಪರ ವಕೀಲ ಮುಕುಲ್ ರೋಹ್ಟಗಿ ಮಾಡಿದ ಮನವಿಯಂತೆ ರಾಜ್ಯಪಾಲರ ಆದೇಶವನ್ನು ಸರ್ಕಾರ ಪಾಲಿಸಲಿಲ್ಲ, ಹೀಗಾಗಿ ನಾಳೆ ಪ್ರಥಮ ಪ್ರಕರಣವಾಗಿ ವಿಚಾರಣೆ ಕೈಗೆತ್ತಿಕೊಳ್ಳಿ ಎಂಬ ಮನವಿಗೆ, ತರಾತುರಿಯಲ್ಲಿ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ನಾಳೆ ಈ ವಿಚಾರವನ್ನು ವಿಚಾರಣೆಗೆ ಪರಿಗಣಿಸುತ್ತೆವೆ ಎಂದಷ್ಟೇ ಸುಪ್ರೀಂ ಕೋರ್ಟ್ ತಿಳಿಸಿದೆ.
ವಿಧಾನಸಭಾ ಅಧಿವೇಶನ ಇಂದು ನಡೆಯಿಲಿದ್ದು, ಈ ನಡುವೆ ಸುಪ್ರೀಂ ಕೋರ್ಟ್ ಸೋಮವಾರ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಆಗದು ಎಂದು ಕೋರ್ಟ ಸ್ಪಷ್ಟಪಡಿಸಿದೆ. ಈ ನಡುವೆ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಶಾಸಕರು ಕಡ್ಡಾಯವಾಗಿ ಭಾಗವಹಿಸುವಂತೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಪ್ ಜಾರಿಗೊಳಿಸುವ ಮೂಲಕ ಅತೃಪ್ತರು ಕಲಾಪಕ್ಕೆ ಬರುವಂತೆ ಸೂಚಿಸಿದ್ದಾರೆ.
ಇಂದು ನಡೆಯಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ವಿಶ್ವಾಸಮತ ನಿರ್ಣಯ ಬಗ್ಗೆ ಚರ್ಚೆ ನಡೆಯಲಿದ್ದು, ಈ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಎಲ್ಲಾ ಶಾಸಕರು ಇಂದಿನ ಕಾರ್ಯಕಲಾಪಗಳಲ್ಲಿ ತಪ್ಪದೆ ಹಾಜರಾಗಬೇಕು ಎಂದು ವಿಪ್ ನಲ್ಲಿ ಉಲ್ಲೇಖಿಸಲಾಗಿದೆ.
ಅಧಿವೇಶನಗಳಲ್ಲಿ ಗೈರಾಗಿ, ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿರುವ ಕಾಂಗ್ರೆಸ್ ಪಕ್ಷದ ಬಂಡಾಯ ಶಾಸಕರಿಗೂ ವಿಪ್ ಜಾರಿಗೊಳಿಸಲಾಗಿದೆ. ಸದನದಲ್ಲಿ ಕಡ್ಡಾಯವಾಗಿ ಹಾಜರಾಗುವ ಮೂಲಕ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಬೆಕು ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.