ಬೆಂಗಳೂರು, ಜು 22 (DaijiworldNews/SM): ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಹೈಡ್ರಾಮಗಳು ನಡೆಯುತ್ತಿದೆ. ಈ ನಡುವೆ ಇಂದು ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಗರಂ ಆಗಿದ್ದಾರೆ. ಗೃಹ ಸಚಿವ ಎಂ.ಬಿ. ಪಾಟೀಲ್ ಅವರನ್ನು ಸ್ಪೀಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.
'ಝೀರೋ ಟ್ರಾಫಿಕ್' ವಿಚಾರ ಸದನದಲ್ಲಿ ಭಾರಿ ಚರ್ಚೆ ನಡೆದಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರನ್ನು ಸ್ಪೀಕರ್ ತರಾಟೆಗೆತ್ತಿಕೊಂಡಿದ್ದಾರೆ. ಸ್ಪೀಕರ್ ಅವರನ್ನು ಭೇಟಿಯಾಗಲು ಮುಂಬೈಯಿಂದ ಬಂದಂತಹ ಅತೃಪ್ತ ಶಾಸಕರಿಗೆ ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಮಾಡಲು ಅವಕಾಶವಿದೆಯೇ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಸದನದಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಎಂ.ಬಿ.ಪಾಟೀಲ್ ಅವರು, 'ಅತೃಪ್ತ ಶಾಸಕರಿಗೆ ಭದ್ರತೆ ನೀಡಬೇಕು ಎಂದು ರಾಜ್ಯಪಾಲರು ಕಮೀಷನರ್ ಅವರಿಗೆ ಸೂಚಿಸಿದ್ದರು, ಆದರೆ ಅವರಿಗೆ ಝೀರೋ ಟ್ರಾಫಿಕ್ ನೀಡಿಲ್ಲ' ಎಂದು ಉತ್ತರಿಸಿದರು. ಆದರೆ ಇದಕ್ಕೆ ಸ್ವತಃ ಸ್ಪೀಕರ್ ಅವರೇ ಆಕ್ಷೇಪ ವ್ಯಕ್ತಪಡಿಸಿ, ನೀವು ನೀಡುತ್ತಿರುವ ಉತ್ತರವನ್ನು ನಿಮ್ಮ ಆತ್ಮ ಸಾಕ್ಷಿಯೇ ಒಪ್ಪುತ್ತಿದೆಯೇ? ಎಂದು ಪ್ರಶ್ನಿಸಿದರು.
ಆ ಶಾಸಕರಿಗೆ ಝೀರೋ ಟ್ರಾಫಿಕ್ ನೀಡಿದ್ದನ್ನು ದೇಶವೇ ನೋಡಿದೆ. ಆದರೆ ನೀವು ಅತೃಪ್ತರಿಗೆ ಝೀರೋ ಟ್ರಾಫಿಕ್ ನೀಡಿಲ್ಲ ಎಂದು ಹೇಳುತ್ತಿದ್ದೀರಿ ಎಂದು ಗರಂ ಆದರು. ಮಾತು ಮುಂದುವರೆಸಿದ ಸ್ಪೀಕರ್, ಈಗ ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ನೀಡಿದ್ದೀರಾ, ಮುಂದೆ ಕ್ರಿಮಿನಲ್ಗಳಿಗೂ ಕೊಟ್ಟುಬಿಡಿ ಎಂದು ಅಸಮಾಧಾನ ಹೊರ ಹಾಕಿದರು.